

ರಾಜ್ಯದ ಸಹಕಾರಿ ಬ್ಯಾಂಕ್ಗಳಲ್ಲಿ ಕೃಷಿ ಚಟುವಟಿಕೆಗೆ ಸಾಲ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳುತ್ತಿದೆ.
| ಹರೀಶ್ ಬೇಲೂರು ಬೆಂಗಳೂರು
2004-05ರಲ್ಲಿ 6.70 ಲಕ್ಷ ರೈತರು 1,188 ಕೋಟಿ ರೂ. ಸಾಲ ತೆಗೆದುಕೊಂಡಿದ್ದರು. ಕಳೆದ 20 ವರ್ಷದಲ್ಲಿ ಈ ಪ್ರಮಾಣ 10 ಪಟ್ಟು ಹೆಚ್ಚಾಗಿದ್ದು, 2023-24ರಲ್ಲಿ ರಾಜ್ಯಾದ್ಯಂತ 19,63,962 ರೈತರು 15,900 ಕೋಟಿ ರೂ. ಸಾಲ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸೇರಿ ವಿವಿಧ ಸಹಕಾರಿ ಬ್ಯಾಂಕ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೀರ್ಘಾವಧಿ ಸಾಲಕ್ಕಿಂತ ಮಧ್ಯಮಾವಧಿ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚು. ಏಕೆಂದರೆ, ಆಗಾಗ ಈ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುತ್ತ ಸರ್ಕಾರಗಳು ರೈತರ ನೆರವಿಗೆ ಬರುತ್ತಿವೆ. ಅದರಂತೆ, ವರ್ಷದಿಂದ ವರ್ಷಕ್ಕೆ ಬಡ್ಡಿ ಮನ್ನಾ ಅನುದಾನವೂ ಹೆಚ್ಚಳವಾಗುತ್ತಿದೆ.
2004-05ರಲ್ಲಿ 45 ಕೋಟಿ ರೂ. ಬಡ್ಡಿ ಮನ್ನಾ ಅನುದಾನವನ್ನು ಅಂದಿನ ಸರ್ಕಾರವು ಸಹಕಾರಿ ಬ್ಯಾಂಕ್ಗಳಿಗೆ ಬಿಡುಗಡೆ ಮಾಡಿತ್ತು. 2023-24ರಲ್ಲಿ 989 ಕೋಟಿ ರೂ. ಬಡ್ಡಿ ಮನ್ನಾ ಮೊತ್ತವನ್ನು ಸರ್ಕಾರ ಪಾವತಿಸಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆದರೆ, ಕೆಲವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕೃಷಿ ಸಾಲ ಪಡೆಯುತ್ತಿದ್ದಾರೆ. ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿಯ ಕೃಷಿ ಸಾಲದ ಮಿತಿ ಹೆಚ್ಚಿಸಿರುವುದು, ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದು ಸೇರಿ ಇತರೆ ಅನುಕೂಲಕರ ನಿಯಮಗಳಿಂದ ಸಾಕಷ್ಟು ರೈತರು ಸಹಕಾರಿ ಬ್ಯಾಂಕ್ಗಳಲ್ಲಿ ಬೆಳೆ ಸಾಲಕ್ಕೆ ಅರ್ಜಿ ಹಾಕುತ್ತಿದ್ದಾರೆ.
ಬಡ್ಡಿ ಮನ್ನಾಕ್ಕೆ ಒತ್ತಾಯ: ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಸಾವಿರಾರು ರೈತರು ಹತ್ತಾರು ವರ್ಷಗಳಿಂದ ಪಡೆದಿರುವ ಸಾಲ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಏಳೆಂಟು ವರ್ಷಗಳಿಂದ ಬಾಕಿ ಉಳಿದಿರುವ 50 ಸಾವಿರ ರೂ. ಸಾಲದ ಮೇಲಿನ ಬಡ್ಡಿ ಏರಿಕೆಗೊಂಡು 2 ಲಕ್ಷ ರೂ.ಗೆ ತಲುಪಿದೆ. 2 ಲಕ್ಷ ರೂ. ಸಾಲವು ಬಡ್ಡಿ ಸೇರಿ 4 ಲಕ್ಷ ರೂ.ಗೆ ಏರಿದರೆ, 4 ಲಕ್ಷ ರೂ. ಸಾಲವು ಬಡ್ಡಿ ಸೇರಿ 6 ಲಕ್ಷ ರೂ.ಗೆ ಹೆಚ್ಚಳವಾಗಿದೆ. ಪ್ರತಿ ವರ್ಷವೂ ಸ್ವಲ್ಪವನ್ನಾದರೂ ಸಾಲ ತೀರಿಸಲು ರೈತರು ಸಾಕಷ್ಟು ಪ್ರಯತ್ನಪಟ್ಟರೂ ಮಳೆ ಕೊರತೆ, ಬೆಳೆ ಹಾನಿ,ಸೂಕ್ತ ಬೆಲೆ ಸಿಗದೆ ಸೇರಿ ಒಂದಿಲ್ಲೊಂದು ಸಮಸ್ಯೆಯಿಂದ ಸಾಧ್ಯವಾಗದಂತಾಗಿದೆ.
ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳ: ಮಳೆ ಕೊರತೆ, ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲಾಗಿಸಿದೆ. ಹೀಗಿದ್ದರೂ ಕೆಲ ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಮರುಪಾವತಿಸುವಂತೆ ರೈತರಿಗೆ ಆಗಾಗ್ಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ. ಕೆಲ ರೈತರು ಸಾಲ ಕಟ್ಟಲಾಗದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. 2022ರ ಏ.1ರಿಂದ 2023ರ ಮಾ.31ರವರೆಗೆ ರಾಜ್ಯಾದ್ಯಂತ ಒಟ್ಟು 968 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, 2023ರ ಏ.1ರಿಂದ 2023ರ ಸೆ.9ರವರೆಗೆ ಒಟ್ಟು 251 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಹಾವೇರಿಯಲ್ಲಿ 38, ಚಿಕ್ಕಮಗಳೂರು 15, ಬೆಳಗಾವಿ 29, ವಿಜಯಪುರ 12, ಯಾದಗಿರಿ 19, ಬೀದರ್ 7, ಕಲಬುರಗಿ 11 ಮತ್ತು ಗದಗದಲ್ಲಿ 4 ಕೇಸ್ಗಳು ವರದಿಯಾಗಿವೆ.