

ಬೆಂಗಳೂರು: ನೋಟಿಸ್ ನೀಡುವ ವಿಷಯದಲ್ಲಿ ರಾಜಭವನದ ಕ್ರಮ ಹಾಗೂ ದೂರು ದಾರ ಟಿ.ಜೆ.ಅಬ್ರಹಾಂ ಕುರಿತು ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಂಪುಟ ಸದಸ್ಯರು ಟೀಕಾ ಪ್ರಹಾರ ನಡೆಸಿದ ಬೆನ್ನಲ್ಲೇ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಯವರನ್ನು ಭೇಟಿ ಮಾಡಲು ಆಗಮಿಸಿದ್ದ ಟಿ.ಜೆ.ಅಬ್ರಹಾಂ ಮಾಧ್ಯಮಗಳೊಂದಿಗೆ ಮಾತನಾಡಿ, ಸಚಿವರ ಜಂಟಿ ಸುದ್ದಿಗೋಷ್ಠಿಯಲ್ಲಿ ಎತ್ತಿದ ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದರು.
1. ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಕೆಸರೆಯಲ್ಲಿ ಕೃಷಿ ಜಮೀನೇ ಇರಲಿಲ್ಲ. 2004ರಲ್ಲಿ ಕೆಸರೆ ಗ್ರಾಮದ 3.16 ಎಕರೆ ಭೂಮಿ ಮಂಜುನಾಥ್ ಸ್ವಾಮಿ ಹೆಸರಿಗೆ ನೋಂದಣಿಯಾಗುತ್ತದೆ. ಆ ಜಾಗ 2001ರಲ್ಲಿಯೇ ದೇವರಾಜ ಬಡಾವಣೆ ಆಗಿತ್ತು. ಆ ಹೆಸರಿನಲ್ಲಿ ಸೈಟು ಮಾಡಿ ಜನರಿಗೆ ಹಂಚಿಕೆಯಾಗಿತ್ತು. ಯಾರಿಗೋ ಹಂಚಿಕೆಯಾಗಿದ್ದ ನಿವೇಶನವನ್ನು ತಮ್ಮ ಕುಟುಂಬದ ಕೃಷಿ ಜಮೀನು ಎಂದು ಮಾಡಿಸಿಕೊಳ್ಳಬಹುದೇ?
2. ವಿಧಾನಸೌಧ ಇರುವ ಜಾಗ ಹಿಂದೆ ನನ್ನ ಕೃಷಿ ಜಮೀನು ಆಗಿತ್ತು ಎಂದು ನಾನು ದಾಖಲೆ ಕೊಟ್ಟರೆ ಸಿಎಂ ಒಪ್ಪಿಕೊಳ್ಳುತ್ತಾರೆಯೇ? ಕೃಷಿ ಭೂಮಿ ಇಲ್ಲದೇ ಇರುವ ಜಾಗ ಕೃಷಿ ಜಮೀನು ಎಂದು ಮಾರಾಟ ಮಾಡಬಹುದೇ?
3. ಸೈಟುಗಳನ್ನು ಪಡೆದವರ ಹೆಸರಿನಲ್ಲಿ ಇವರು ಕಂದಾಯ ಕಟ್ಟುತ್ತಿದ್ದರೇ? ರಸ್ತೆ ಅಭಿವೃದ್ಧಿಪಡಿಸಿ, ನಿವೇಶನ ಮಾಡಿ ಹಂಚಿರುವ ಜಾಗಕ್ಕೆ ಇವರು ಕನ್ವರ್ಷನ್ ಮಾಡಿಸಿಕೊಡುತ್ತಾರಾ?
4. 2004ರಲ್ಲಿ ನೀವು ಕೊಂಡುಕೊಂಡಾಗ ಕೃಷಿ ಭೂಮಿ ಎಲ್ಲಿ ಇತ್ತು ಎಂದು ಸಿಎಂ ಹೇಳುತ್ತಾರಾ? ದೇವನೂರು ಬಡಾವಣೆ ವೀಕ್ಷಣೆಗೆ ತಹಶಿಲ್ದಾರರು, ಡಿಸಿಗಳು ಹೋಗಿದ್ದರೇ? ಆಗ ಅಲ್ಲಿ ಕೃಷಿ ಭೂಮಿ ಎಲ್ಲಿತ್ತು?
5. ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿದ್ದರಂತೆ ಆಗ ನಿವೇಶನ ಕಾಣಿಸಲಿಲ್ಲವೇ? ಅದೇ ಸಮಯದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು, ಆಗ ಪ್ರಭಾವ ಬಳಸಲಿಲ್ಲವೇ? ಇದೇ ಜಮೀನು ಡಿನೋಟಿಫೈ ಆದಾಗಲೂ ಡಿಸಿಎಂ ಆಗಿದ್ದರಲ್ಲ, ಇದರ ಬಗ್ಗೆ ತನಿಖೆ ಆಗಬಾರದೇ?
6. ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ನೇರವಾಗಿ ಅವರದೇ ಸಹಿ ಇರಬೇಕು ಅಂತಿಲ್ಲ. 2010ರಲ್ಲಿ ಗ್‌ಟಿ ಡೀಡ್ ಆದಾಗ ಕೃಷಿ ಭೂಮಿ ಎಂದು ನಮೂದು ಮಾಡುತ್ತಾರೆ. 2001ರಲ್ಲಿ ಬಡಾವಣೆ ಆದ ಜಾಗಕ್ಕೆ 2010 ರಲ್ಲಿ ಕೃಷಿ ಭೂಮಿ ಎಂದು ಹೇಗೆ ನಮೂದು ಮಾಡಲು ಸಾಧ್ಯ?
7. ಸಿಎಂ ಪತ್ನಿ ಪಾರ್ವತಿಯವರ ಅಣ್ಣ ಕೊಂಡುಕೊಂಡೆ ಎಂಬ ಜಮೀನು ಅಲ್ಲಿ ಇಲ್ಲವೇ ಇಲ್ಲ. ಹಾಗಿದ್ದ ಮೇಲೆ ಇಲ್ಲದೇ ಇರುವ ಭೂಮಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಿಕೊಂಡಂತಾಗಲಿಲ್ಲವೇ? ಇದು ಅಕ್ರಮವಲ್ಲವೇ?
8. ಜಮೀನು ಮುಡಾಗೆ ಬಿಟ್ಟುಕೊಡಬೇಕೇ ಎಂದು ಸಿದ್ದರಾಮಯ್ಯ ಕೇಳಿದ್ದರು, ಇಲ್ಲದೇ ಇರುವ ಜಮೀನಿಗೆ ಪರಿಹಾರ ಹೇಗೆ ಪಡೆದರು? ಸಾಮಾನ್ಯ ಜನರಿಗೆ ಇದು ಸಾಧ್ಯವೇ?
9. ರಾಜ್ಯಪಾಲರೊಂದಿಗೆ ಒಂದೂವರೆ ಗಂಟೆ ದಾಖಲೆ ಸಹಿತ ವಿವರಣೆ ನೀಡಿದೆ, ನಂತರವೇ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಕೊಟ್ಟಿದ್ದು ತಪ್ಪು ಹೇಗೆ ಆಗುತ್ತದೆ? ಕಾನೂನು ಬದ್ಧವಾಗಿಯೇ ಇದೆಯಲ್ಲವೇ?
10. ಇದೊಂದು ರಾಜಕೀಯ ಪ್ರೇರಿತ ಪ್ರಯತ್ನ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ದೂರಿನ ಜತೆಗೆ ನಾನು ಕೋರ್ಟ್ ಸರ್ಕ್ಯುಲರ್ ನೀಡಿದ್ದೇನೆ. ಅದರ ಪ್ರಕಾರ ನಾನು ರಾಜ್ಯಪಾಲರನ್ನು ನೇರವಾಗಿ ಭೇಟಿ ಮಾಡಿದ್ದು ತಪ್ಪಲ್ಲ. ಕಾನೂನು ಪ್ರಕಾರವೇ ನಾನು ರಾಜ್ಯಪಾಲರ ಭೇಟಿ ಮಾಡಿದ್ದೇನೆ. ಮಂತ್ರಿಗಳು ಕಣ್ಣುಮುಚ್ಚಿಕೊಂಡಿದ್ದರೇ? ಆದನ್ನು ಓದಲಿಲ್ಲವೇ?