

ಶಿವಮೊಗ್ಗ: ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ ಚುನಾವಣಾ ಕಣ ರಂಗೇರುತ್ತಿದೆ. ಈವರೆಗೆ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ನಾಲ್ವರು ಮರು ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ, ಎಸ್.ಪಿ.ದಿನೇಶ್, ಅಗಡಿ ಅಶೋಕ್ ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ನಗರಸಭೆ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸೇರುವ ನಿರೀಕ್ಷೆಯಿಂದ ಕಣಕ್ಕಿಳಿದಿದ್ದಾರೆ.
ಎಸ್.ಕೆ.ಮರಿಯಪ್ಪ ಈಗಾಗಲೇ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಿ ಹಿರಿಯ ಸಹಕಾರಿಗಳ ಪಟ್ಟಿಗೆ ಸೇರಿದ್ದಾರೆ. ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಇದೇ ಮೊದಲ ಬಾರಿಗೆ ಸಹಕಾರಿ ವಲಯಕ್ಕೆ ಪ್ರತಿಷ್ಠಿತ ಬ್ಯಾಂಕ್ ಮೂಲಕ ಗ್ರಾೃಂಡ್ ಎಂಟ್ರಿ ನೀಡಲು ಮುಂದಾಗಿದ್ದಾರೆ. ಕೆ.ಎಲ್.ಜಗದೀಶ್ವರ್, ರವೀಂದ್ರ, ಶಿವಶಂಕರ್, ಹನುಮಂತಪ್ಪ ನಾಮಪತ್ರ ಸಲ್ಲಿಸಿರುವವರ ಪಟ್ಟಿಯಲ್ಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಜೂ. 20ರವರೆಗೂ ಅವಕಾಶವಿದ್ದು, ಇನ್ನೂ ಹಲವು ಘಟಾನುಘಟಿಗಳು ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆಗಳಿವೆ.