

ಬೆಂಗಳೂರು: ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚೇ ತೆರಿಗೆಯನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದು, ಅನ್ಯಾಯವಾಗಿದೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ 51,876 ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕರ್ನಾಟಕ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
2014-15ರಲ್ಲಿ 24,789.78 ಕೋಟಿ ತೆರಿಗೆ ಹಂಚಿಕೆ ಆಗಿದ್ದರೆ, 2025-2 6ರ ಆರ್ಥಿಕ ವರ್ಷ ಇದಕ್ಕಿಂತ ಶೇ.108ರಷ್ಟು (51876 ಕೋಟಿ ರೂ.)ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ಪ್ರಲ್ಹಾದ ಜೋಶಿ ತುಲನೆ ಮಾಡಿದ್ದಾರೆ.
15ನೇ ಹಣಕಾಸು ಆಯೋಗದಿಂದ ಕರ್ನಾಟಕದ ತೆರಿಗೆ ಪಾಲು ಶೇ.3.647ರಷ್ಟು ಎಂದು ನಿಗದಿಪಡಿಸಲಾಗಿದೆ. 2004-2014ರ ದಶಕದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ 81,795 ಕೋಟಿ ರೂಪಾಯಿ ನೀಡಲಾಗಿತ್ತು. 2014-2024ರ ದಶಕದಲ್ಲಿ ಮೋದಿ ನೇತೃತ್ವದ ಸರ್ಕಾರ ಬರೋಬ್ಬರಿ 2,85,452 ಕೋಟಿ ರೂ ತೆರಿಗೆ ಹಂಚಿಕೆ ಮಾಡಿದೆ ಎಂದು ಅಂಕಿ ಅಂಶ ಸಹಿತ ವಿವರಿಸಿದ್ದಾರೆ.
ರಾಜ್ಯದಲ್ಲಿ 7,564 ಕೋಟಿ ರೂ. ವೆಚ್ಚದಲ್ಲಿ 15 ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನೀಡಿದೆ. ಇದು ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿಕೊಂಡಿದ್ದಾರೆ.
ನವೋದ್ಯಮ (ಸ್ಟಾರ್ಟ್ ಅಪ್)ಗಳಿಗೆ 10 ವರ್ಷಗಳ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದ್ದು, (ಏಪ್ರಿಲ್ 2030 ರವರೆಗೆ ಅನ್ವಯಿಸಲಿದೆ) ಜತೆಗೆ 10,000 ಕೋಟಿ ರೂ. ಅನುದಾನ ನೀಡಲಾಗಿದೆ ಎಂದಿದ್ದಾರೆ.
ಕರ್ನಾಟಕದ ಬೆಳವಣಿಗೆಗೆ ಈ ಬಲಿಷ್ಠ ಸುಧಾರಣೆ ಕ್ರಮಗಳು, ದೊಡ್ಡ ಅವಕಾಶಗಳು ಉಜ್ವಲ ಭವಿಷ್ಯ ರೂಪಿಸಲಿವೆ. ಇದರೊಂದಿಗೆ ಕರ್ನಾಟಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಲ್ಹಾದ ಜೋಶಿ ಆಶಿಸಿದ್ದಾರೆ.