10 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ

CCB
Published on

ಬೆಂಗಳೂರು: ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ೧೦ ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಇಮ್ರಾನ್ ಖಾನ್(40) ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಠಾಣೆ ವ್ಯಾಪ್ತಿಯ ಅರೆಕಂಪನಹಳ್ಳಿಯಲ್ಲಿ ಆರೋಪಿ ಇಮ್ರಾನ್ ಖಾನ್ ಎಚ್.ಎಂ.ಟ್ರೇಡರ್ಸ್ ಎಂಬ ದಿನ ಬಳಕೆ ಹಾಗೂ ದಿನಸಿ ವಸ್ತುಗಳ ಮಾರಾಟ ಮಳಿಗೆ ಹೊಂದಿದ್ದಾನೆ. ಅದರಲ್ಲಿ ಅವಧಿ ಮೀರಿದ ಪ್ರತಿಷ್ಠಿತ ಕಂಪನಿಗಳ ಚಾಕೋಲೇಟ್, ಬಿಸ್ಕೆಟ್ ಮತ್ತು ತಿಂಡಿ, ತಿನಿಸುಗಳು ಸೇರಿ ವಿವಿಧ ಮಾದರಿಯ ಹತ್ತಾರು ಆಹಾರ ಪಾದಾರ್ಥಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅಕ್ರಮವಾಗಿ ಅಂಗಡಿಯಲ್ಲಿ ದಾಸ್ತಾನು ಮಾಡಿಕೊಂಡಿದ್ದ. ಅಲ್ಲದೆ, ಆ ಪದಾರ್ಥಗಳ ಮೇಲಿನ ದಿನಾಂಕದ ಅವಧಿ ಮತ್ತು ದರ ಪಟ್ಟಿಯ ಲೇಬಲ್‌ಗಳನ್ನು ತೆಗೆದು ಹಾಕಿ, ಸಾರ್ವಜನಿಕರಿಗೆ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮಳಿಗೆಯಲ್ಲಿದ್ದ ೧೦ ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಪಾದರ್ಥಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಮಾರಾಟ:
ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸಗಟು ವ್ಯಾಪಾರಿಗಳು ಆಯಾ ಕಂಪನಿಗಳಿಗೆ ಹಿಂದಿರುಗಿಸುತ್ತಾರೆ. ಆದರೆ, ಕೆಲ ಸಗಟು ವ್ಯಾಪಾರಿಗಳು, ಕಂಪನಿಗಳಿಂದ ಹಣ ವಾಪಸ್ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ, ಅಲ್ಪ ಮೊತ್ತಕ್ಕೆ ಇಂತಹ ವ್ಯಾಪಾರಿಗಳಿಗೆ ಮಾರುತ್ತಾರೆ. ಅವುಗಳನ್ನು ಖರೀದಿಸಿದ ವ್ಯಾಪಾರಿ ಅವುಗಳ ಮೇಲಿನ ಲೇಬಲ್ ತೆಗೆದು ಹಾಕಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಬಿ ಮಂಜುನಾಥ್ ಚೌಧರಿ, ಇನ್‌ಸ್ಪೆಕ್ಟರ್ ಸಂತೋಷ್ ರಾವ್ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net