ಚೆಸ್ ಪಟುಗೆ 10 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ

highcourt
Published on

ಬೆಂಗಳೂರು: ಅಂತಾರಾಷ್ಟ್ರೀಯ ಚೆಸ್ ಪಟು ಸಂಜನಾ ರಘುನಾಥ್‌ಗೆ ಕೀಡಾ ಕೋಟಾದಡಿ ಅರ್ಹತೆ ಇದ್ದರೂ ವೈದ್ಯಕೀಯ ಸೀಟು ನೀಡುವಲ್ಲಿ ವಿಫಲರಾದ ಹಿನ್ನೆಲೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಎಚ್‌ಎಸ್‌ಆರ್ ಲೇಔಟ್ ವಾಸಿ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ಮಾಡಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ, ಅರ್ಜಿದಾರರು 2018ರಲ್ಲಿ ಏಷ್ಯಾ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಅವರು ಕ್ರೀಡಾ ಕೋಟಾದ ಸೀಟು ಪಡೆಯುವಾಗ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಲಾಗಿದೆ. ನಿಯಮಗಳ ಪ್ರಕಾರ, ಅದು ತಪ್ಪು ಮತ್ತು ಆ ವರ್ಗೀಕರಣ ಊರ್ಜಿತವಾಗದು. ವರ್ಗೀಕರಣ ಸಂಬಂಧ 2023ರ ಜೂ.23ರಂದು ಹೊರಡಿಸಿರವ ಸುತ್ತೋಲೆ 2006ರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆದೇಶಿಸಿದೆ.

ಅರ್ಜಿದಾರರು ಪಿ-1 ಶ್ರೇಣಿಯ ಅಭ್ಯರ್ಥಿಯಾಗಿ ಪ್ರವೇಶ ಪಡೆಯಲು ಅವರು ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹಾಗಾಗಿ ಅವರು 10 ಲಕ್ಷ ರೂ. ಪರಿಹಾರಕ್ಕೆ ಅರ್ಹರು. ಸರ್ಕಾರ ಆರು ವಾರಗಳಲ್ಲಿ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶನ ನೀಡಿದೆ.

ಅರ್ಜಿದಾರರಿಗೆ ಅದೇ ಶೈಕ್ಷಣಿಕ ವರ್ಷ ಅಥವಾ ಬೇರೆ ವರ್ಷದಲ್ಲಿ ಪ್ರವೇಶಾತಿ ಒದಗಿಸಿಕೊಡಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಪರಿಹಾರ ರೂಪದಲ್ಲಿ ಆಗಿರುವ ನಷ್ಟ ಭರಿಸಬೇಕು. ಜತೆಗೆ ಅರ್ಜಿದಾರರಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದ ಕಾರಣ ಅವರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸರಿಸುಮಾರು 11 ಲಕ್ಷ ಹಣ ಪಾವತಿಸಿದ್ದಾರೆ. ಹಾಗಾಗಿ ಅವರಿಗೆ 10 ಲಕ್ಷ ರೂ.ಪರಿಹಾರ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಮನವಿ ಏನಿತ್ತು?

ಅರ್ಜಿದಾರರ ಪರ ವಕೀಲ ಎಂ.ಪಿ. ಶ್ರೀಕಾಂತ್, ಫಿಡೆ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಸೇರಿ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದ ಅರ್ಜಿದಾರರು ಎಲ್ಲ ರೀತಿಯಲ್ಲಿ ಪಿ-1 ಶ್ರೇಣಿಗೆ ಅರ್ಹರಾಗಿದ್ದಾರೆ. ಆದರೆ ಕೆಇಎ ಕೆಲವೊಂದು ಆಕ್ಷೇಪಣೆ ಎತ್ತಿ ಅವರಿಗೆ ತಪ್ಪಾಗಿ ಪಿ-5 ಶ್ರೇಣಿ ನೀಡಿದ್ದರಿಂದ ಅವರು ಕ್ರೀಡಾ ಕೋಟಾದಡಿ ಸೀಟು ಪಡೆಯುವುದರಿಂದ ವಂಚಿತರಾಗಿದ್ದಾರೆ. ಹಾಗಾಗಿ ಅವರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿದ್ದರು. ಅಲ್ಲದೆ, ಕ್ರೀಡಾ ಕೋಟಾ ಸಂಬಂಧ 2023ರ ಜೂ.23ರಂದು ಹೊರಡಿಸಿರುವ ಸುತ್ತೋಲೆ 2009ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net