ವಿಶ್ವಾದ್ಯಂತ 100 ತಾಸಿನಲ್ಲಿ 10 ಲಕ್ಷ ಕರೊನಾ ಪ್ರಕರಣಗಳು ಪತ್ತೆ

Corona
Published on

ನವದೆಹಲಿ: ವಿಶ್ವದಲ್ಲಿ 2.40 ಲಕ್ಷಕ್ಕೂ ಅಧಿಕ ಕರೊನಾ ಪ್ರಕರಣಗಳು ಶುಕ್ರವಾರ ಒಂದೇ ದಿನ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1.43 ಕೋಟಿಗೂ ಹೆಚ್ಚಾಗಿದೆ. ಕೇವಲ 100 ತಾಸಿನ ಅವಧಿಯಲ್ಲಿ (ನಾಲ್ಕು ದಿನ) 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಅಮೆರಿಕದಲ್ಲಿ 75 ಸಾವಿರ, ಭಾರತದಲ್ಲಿ 34,800 ಮತ್ತು ಬ್ರೆಜಿಲ್​ನಲ್ಲಿ 34 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಜಾಗತಿಕವಾಗಿ 5,558 ಜನರು ಸೋಂಕಿಗೆ ಮೃತರಾಗಿದ್ದು, ಈ ಪೈಕಿ ಬ್ರೆಜಿಲ್​ನ 1,100, ಅಮೆರಿಕದ 946, ಭಾರತದ 676 ಮಂದಿಯೂ ಸೇರಿದ್ದಾರೆ. ಹೆಚ್ಚು ಬಾಧಿತ ದೇಶಗಳ ಪಟ್ಟಿಯಲ್ಲಿ 38 ಲಕ್ಷ ಪ್ರಕರಣದೊಂದಿಗೆ ಅಮೆರಿಕ ಮೊದಲನೇ ಸ್ಥಾನ, 20.50 ಲಕ್ಷ ಪ್ರಕರಣದೊಂದಿಗೆ ಬ್ರೆಜಿಲ್ ಎರಡನೇ ಸ್ಥಾನ ಮತ್ತು 10.66 ಲಕ್ಷ ಪ್ರಕರಣದೊಂದಿಗೆ ಭಾರತ ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೂ, 26,500 ಸಾವಿನೊಂದಿಗೆ 8ನೇ ಸ್ಥಾನದಲ್ಲಿ ಮುಂದುವರಿದಿದೆ.

ವುಹಾನ್ ಲ್ಯಾಬ್​ಗಳ ನ್ಯೂನತೆ ತೆರೆದಿಟ್ಟ ಅಮೆರಿಕ: 2018ರಲ್ಲಿ ಚೀನಾದಲ್ಲಿರುವ ಅಮೆರಿಕ ರಾಯಭಾರಿಗಳು ವುಹಾನ್​ನ ವೈರಾಲಜಿ ಪ್ರಯೋಗಾಲಯ ಪರಿಶೀಲನೆ ನಡೆಸಿದಾಗ ಅಲ್ಲಿ ನುರಿತ ತಜ್ಞರು ಮತ್ತು ಸೂಕ್ತ ತರಬೇತಿ ಪಡೆದ ಸಿಬ್ಬಂದಿ ಇರಲಿಲ್ಲ ಎಂದು ಅಮೆರಿಕ ತಿಳಿಸಿದೆ. ಆದರೆ ಆ ಲ್ಯಾಬೋರೇಟರಿಯಲ್ಲಿ ಸಂಶೋಧನೆ ನಡೆಸಲಾಗುತ್ತಿದ್ದ ಕರೊನಾ ರೀತಿಯ ಸೋಂಕಿಗೂ ಇದೀಗ ಹರಡಿರುವ ಎಸ್​ಎಆರ್​ಎಸ್ ಸೋಂಕಿಗೂ ಕೆಲ ವ್ಯತ್ಯಾಸಗಳಿವೆ. ಹಾಗಾಗಿ ಕರೊನಾ ಸೋಂಕು ಲ್ಯಾಬೋರೇಟರಿಯಿಂದ ಉದ್ದೇಶಪೂರ್ವಕವಾಗಿ ಹರಡಿದೆ ಎನ್ನುವುದಕ್ಕೆ ಖಚಿತ ಪುರಾವೆಗಳಿಲ್ಲ ಎನ್ನಲಾಗಿದೆ.

ವಸತಿ ಸಮುಚ್ಚಯಗಳಿಗೆ ಮಾರ್ಗಸೂಚಿ: ವಸತಿ ಸಮುಚ್ಚಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಾಂಪ್ಲೆಕ್ಸ್​ನ ಗೇಟ್​ಗಳಲ್ಲಿ ಸ್ಯಾನಿಟೈಸರ್ ಕಡ್ಡಾಯ. ಕಾಂಪ್ಲೆಕ್ಸ್​ಗೆ ಬರುವ ಅತಿಥಿಗಳು, ಮನೆ ಕೆಲಸಗಾರರು, ಡೆಲಿವರಿ ಬಾಯ್ಸ್​  ಕಾರ್ ಕ್ಲೀನರ್​ಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. 65 ವರ್ಷ ಮೇಲ್ಪಟ್ಟವರು, ಕಾಯಿಲೆಗಳಿಂದ ಬಳಲುತ್ತಿರುವವರು, 10 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಗೆ ಬಾರದಿರುವಂತೆ ಸೂಚಿಸಲಾಗಿದೆ.

ಸಕ್ರಿಯಕ್ಕಿಂತ ಮೂರು ಲಕ್ಷಕ್ಕೂ ಹೆಚ್ಚು ಗುಣಮುಖ ಪ್ರಕರಣ: ದೇಶದಲ್ಲಿರುವ ಸಕ್ರಿಯ ಪ್ರಕರಣಗಳಿಗಿಂತ 3.03 ಲಕ್ಷಕ್ಕೂ ಹೆಚ್ಚು ಗುಣಮುಖ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ 3.68 ಲಕ್ಷ ಸಕ್ರಿಯ ಪ್ರಕರಣಗಳಿವೆ. 6.71 ಲಕ್ಷ ಸೋಂಕಿತರು ಈಗಾಗಲೇ ಗುಣಮುಖರಾಗಿದ್ದಾರೆ. 24 ತಾಸುಗಳಲ್ಲಿ 17 ಸಾವಿರ ಸೋಂಕಿತರು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ. 63ರಷ್ಟಿದೆ. ಈ ವರೆಗೆ ಒಟ್ಟು 13.43 ಕೋಟಿ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಸರಾಸರಿ 10 ಲಕ್ಷ ಜನರಲ್ಲಿ 9,734.6 ಜನರಿಗೆ ಕರೊನಾ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

ಚುನಾವಣೆ ನಡೆಸಲು ಸಲಹೆ ಕೇಳಿದ ಆಯೋಗ: ಕರೊನಾ ವೈರಸ್ ಪಸರಿಸುತ್ತಿರುವ ಈ ಸಮಯದಲ್ಲಿ ಚುನಾವಣೆ ಮತ್ತು ಪ್ರಚಾರದ ಕುರಿತು ಸಲಹೆ ನೀಡುವಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳನ್ನು ಕೇಳಿದೆ. ಈ ಕುರಿತಾಗಿ ಜುಲೈ 31ರೊಳಗೆ ಸಲಹೆ ನೀಡುವಂತೆ ತಿಳಿಸಿದೆ. ಬಿಹಾರದ ಪ್ರಸ್ತುತ ಸರ್ಕಾರದ ಆಡಳಿತಾವಧಿಯು ನವೆಂಬರ್ 29ರಂದು ಕೊನೆಗೊಳ್ಳಲಿದ್ದು, ಅಷ್ಟರೊಳಗಾಗಿ ಚುನಾವಣೆ ನಡೆಯಬೇಕಿದೆ. ಹಾಗಾಗಿ ಚುನಾವಣೆ, ಪ್ರಚಾರ ಸಭೆಗಳನ್ನು ನಡೆಸಲು ಸೂಕ್ತ ಸಲಹೆಯನ್ನು ಪಕ್ಷಗಳು ನೀಡಲಿ. ಅದರ ಆಧಾರದ ಮೇಲೆ ಒಂದು ಮಾರ್ಗಸೂಚಿಯನ್ನು ತಯಾರಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಬೆಂಗಳೂರು ಹಾಟ್​ಸ್ಪಾಟ್: ದೇಶದಲ್ಲಿ ಶರವೇಗದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕಿಗೆ ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಹೊಸ ಹಾಟ್​ಸ್ಪಾಟ್​ಗಳಾಗಿ ಪರಿವರ್ತನೆಗೊಂಡಿವೆ. ದೆಹಲಿ, ಮುಂಬೈ, ಚೆನ್ನೈ ಮತ್ತು ಅಹಮದಾಬಾದ್ ನಂತರ ಈ ಮೂರು ನಗರಗಳು ಹಾಟ್​ಸ್ಪಾಟ್​ಗಳ ಪಟ್ಟಿಗೆ ಸೇರಿಕೊಂಡಿವೆ. ಸಾವಿನ ಪ್ರಮಾಣದಲ್ಲಿ ಅಹಮದಾಬಾದ್ ಮೊದಲ ಸ್ಥಾನದಲ್ಲಿದ್ದು, ಮುಂಬೈ ಮತ್ತು ಚೆನ್ನೈ ಪಟ್ಟಿಯ ಎರಡು ಮೂರನೇ ಸ್ಥಾನದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net