

Kerala Mass Murder: ಆರಂಭದಲ್ಲಿ ಎಲ್ಲರನ್ನೂ ಕಬ್ಬಿಣದ ತಂತಿಯಿಂದಲೇ ಹತ್ಯೆಗೈಯಲು ಅಫಾನ್ ಉದ್ದೇಶಿಸಿದ್ದ. ಆದರೆ, ನಂತರ ಸುಲಭವಾಗಿ ಮನೆಗೆ ಹೊತ್ತೊಯ್ಯಲು ಸುತ್ತಿಗೆ ಖರೀದಿಸಿರುವುದು ವಿಚಾರಣೆಯಲ್ಲಿ ಸ್ಪಷ್ಟವಾಗಿದೆ. ಕುಟುಂಬಸ್ಥರನ್ನು ಬರ್ಬರವಾಗಿ ಕೊಲೆ ಮಾಡಲು ಆರೋಪಿ ಇಂಟರ್ನೆಟ್ ಅನುಸರಿಸಿಲ್ಲ. ಗೂಗಲ್ ಅಥವಾ ಇತರೆ ಜಾಲಗಳಲ್ಲಿ ಮಾರ್ಗವನ್ನು ಹುಡುಕಿಲ್ಲ. ಸಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾರಣ ಪ್ರೇಯಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಫಾನ್ ಅಡವಿಟ್ಟು, ಹಣ ಪಡೆದಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಅಫಾನ್ ತನ್ನ ತಂದೆಯ ಸಹೋದರನಿಂದ 10 ಲಕ್ಷ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದಿರುವ ಬಗ್ಗೆ ಸಾಕ್ಷ್ಯ ಸಂಗ್ರಹದ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ತನಿಖಾ ತಂಡಕ್ಕೆ ನೀಡಿರುವ ಹೇಳಿಕೆಯ ಪ್ರಕಾರ, ಪ್ರತಿದಿನ ಬಡ್ಡಿ ಪಾವತಿಸುವ ಮೂಲಕ ಬಡ್ಡಿದಾರರಿಂದ ಹೆಚ್ಚಿನ ಹಣವನ್ನು ಅಫಾನ್ ಸಾಲ ಪಡೆದಿದ್ದ. ಈ ಮಧ್ಯೆ 2.5 ಲಕ್ಷ ರೂ. ಮೌಲ್ಯದ ದುಬಾರಿ ಬೈಕ್ ಮತ್ತು ಅದರ ಬೆನ್ನಲ್ಲೇ ಒಂದು ಕಾರನ್ನು ಖರೀದಿಸಿದ್ದ. ಇದನ್ನು ನೋಡಿದ ಸಾಲಗಾರರು ಅಫಾನ್ ಬೆನ್ನೇರಿ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದರು.
ಇನ್ನು ಪ್ರೇಯಸಿ ಫರ್ಜಾನಾಳ ಬಳಿಯಿದ್ದ ಚಿನ್ನದ ಸರವನ್ನು ಪಡೆದಿದ್ದ ಅಫಾನ್, ಅದನ್ನೂ ಗಿರವಿಯಿಟ್ಟು ಹಣ ಪಡೆದಿದ್ದ. ಕೆಲ ದಿನಗಳು ಸುಮ್ಮನಿದ್ದ ಗೆಳತಿ, ಸರವನ್ನು ವಾಪಾಸ್ ತಂದುಕೊಡುವಂತೆ ಒತ್ತಾಯಿಸಿದ್ದಾಳೆ. ಇದು ನನ್ನ ತಂದೆ ನನಗೆ ಕೊಡಿಸಿದ್ದು. ಅವರ ಗಮನಕ್ಕೆ ಬಂದರೆ ಬಹಳ ಕಷ್ಟ. ಆದಷ್ಟು ಬೇಗ ಅದನ್ನು ನನಗೆ ಹಸ್ತಾಂತರಿಸು ಎಂದು ಹೇಳಿದ್ದಾಳೆ. ಇದೂ ಸಹ ಅಫಾನ್ ಮೇಲೆ ತೀವ್ರ ಒತ್ತಡ ಹೇರಿದೆ.
ಆರಂಭದಲ್ಲಿ ಅಫಾನ್ ಉಲ್ಲೇಖಿಸಿದ್ದ 70 ಲಕ್ಷ ಸಾಲವನ್ನು ತನಿಖಾ ತಂಡವು ದೃಢಪಡಿಸಿಕೊಂಡಿದೆ. ಈ ಬಗ್ಗೆ ಅಫಾನ್ ಮತ್ತು ಆತನ ತಾಯಿ ಶೆಮಿಯ ಮೊಬೈಲ್ ಫೋನ್‌ಗಳಲ್ಲಿದ್ದ ಮಾಹಿತಿಯನ್ನು ಪಡೆಯಲಾಗಿದೆ. ಚಿಟ್ ಫಂಡ್ ನಡೆಸುವ ಮೂಲಕ ಶೆಮಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದರು ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ. ಆದಾಗ್ಯೂ, ಅಫಾನ್‌ನ ತಂದೆ ಮಾತ್ರ ಇದ್ಯಾವುದು ತನಗೆ ಗೊತ್ತಿಲ್ಲ ಎಂದೇ ಹೇಳಿದ್ದಾರೆ. ಈ ಮಧ್ಯೆ, ತಾನು ಸ್ವಲ್ಪ ಹಣವನ್ನು ಮನೆಗೆ ಕಳುಹಿಸಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಆದಾಗ್ಯೂ, ಬ್ಯಾಂಕ್ ದಾಖಲೆಗಳಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತನಿಖಾ ತಂಡ ಸ್ಪಷ್ಟಪಡಿಸಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ.
ಕೇರಳದ ತಿರುವನಂತಪುರಂನಲ್ಲಿ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿಯೂ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಅಫಾನ್ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಈ ಪ್ರಕರಣ ಇನ್ನೂ ತನಿಖೆಯಲ್ಲಿದೆ,(ಏಜೆನ್ಸೀಸ್).