

ಬೆಂಗಳೂರು: ರಾಜ್ಯ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಕೇಂದ್ರದ ತೆರಿಗೆ ಹಂಚಿಕೆ ಪಾಲು ಮುಂದಿನ ಆರ್ಥಿಕ ಸಾಲಿನಲ್ಲಿ ಕರ್ನಾಟಕಕ್ಕೆ ಲಭ್ಯವಾಗುತ್ತಿದೆ. ತೆರಿಗೆ ಹಂಚಿಕೆ ವಿಚಾರ ಕಾಂಗ್ರೆಸ್ ಪಾಲಿನ ಪ್ರಬಲ ಅಸ್ತ್ರ. ಆಂದೋಲನ ರೂಪದಲ್ಲೂ ಕೇಂದ್ರದ ವಿರುದ್ಧ ಮುಗಿಬಿದ್ದಿದ್ದ ಸರ್ಕಾರ ಹಾಗೂ ಆಡಳಿತ ಪಕ್ಷ ಅಬ್ಬರಿಸಿತ್ತು.
ಶನಿವಾರದ ಮಂಡನೆಯಾದ ಬಜೆಟ್ನಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಒಟ್ಟು ತೆರಿಗೆ ಹಂಚಿಕೆಯಲ್ಲಿ ಶೇ.3.647ಯಂತೆ ನಿಗದಿ ಮಾಡಲಾಗಿದೆ. ಆ ಪ್ರಕಾರ ರಾಜ್ಯಕ್ಕೆ 2025-26ನೇ ಸಾಲಿನಲ್ಲಿ 51,876.54 ಕೋಟಿ ಲಭ್ಯವಾಗುವುದು. ಅಚ್ಚರಿ ಎಂದರೆ ರಾಜ್ಯ ಸರ್ಕಾರ ಈ ಅವಧಿಯಲ್ಲಿ 46,300 ಕೋಟಿ ರೂ.ನಷ್ಟು ಬರಬಹುದೆಂದು ಅಂದಾಜಿಸಿತ್ತು. ಅಂದರೆ ಹೆಚ್ಚುವರಿಯಾಗಿ ಐದು ಸಾವಿರ ಕೋಟಿ ರೂ. ಸಿಕ್ಕಂತಾಗಲಿದೆ.
ತೆರಿಗೆ ಹಂಚಿಕೆ ಎಷ್ಟು ಪ್ರಮಾಣದಲ್ಲಿ ಆಗಬೇಕೆಂಬುದನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. 2017ರ ನವೆಂಬರ್ನಲ್ಲಿ ರಚನೆಯಾಗಿದ್ದ ಹಣಕಾಸು ಆಯೋಗದ ಮುಂದೆ ಅಂದಿನ ರಾಜ್ಯ ಸರ್ಕಾರಗಳು ತಮ್ಮ ಅಪೇಕ್ಷೆಗಳನ್ನು ಇಟ್ಟಿದ್ದವು. ಬೇಡಿಕೆಗಳನ್ನು ತುಲನೆ ಮಾಡಿದ ಬಳಿ ಆಯೋಗ ತೆರಿಗೆ ಪಾಲು ನಿರ್ಧರಣೆ ಮಾಡಿದ್ದು, ಕರ್ನಾಟಕಕ್ಕೆ 2025-26ರ ವರೆಗೂ ಶೇ.3.647 ರಂತೆಯೇ ತೆರಿಗೆ ಪಾಲು ಹಂಚಿಕೆಯಾಗಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪರಿಷ್ಕೃತ ಆಯವ್ಯಯದಂತೆ 46,932.72 ಕೋಟಿ ರೂ. ತೆರಿಗೆ ಪಾಲು ರಾಜ್ಯಕ್ಕೆ ಬರುತ್ತಲಿದೆ (ಕೊನೇ ಕಂತು ಬರಬೇಕಿದೆ). ರಾಜ್ಯ ಸರ್ಕಾರದ ಪ್ರಕಾರ 44,485.49 ಕೋಟಿ ರೂ. ಬರಬೇಕಿತ್ತು. ಅಂದರೆ ನಿರೀಕ್ಷಿಸಿದ್ದಕ್ಕಿಂತ ಎರಡು ಸಾವಿರ ಕೋಟಿ ಹೆಚ್ಚುವರಿಯಾಗಿ ಸಿಕ್ಕಿದಂತಾಗುತ್ತಿದೆ.
2025-26ನೇ ಸಾಲಿನ ತೆರಿಗೆ ಹಂಚಿಕೆಯನ್ನು ಗಮನಿಸುವುದಾದರೆ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಜಿಎಸ್ಟಿ, ಸೇವಾ ತೆರಿಗೆ ಸೇರಿ ಕೇಂದ್ರ ಸರ್ಕಾರಕ್ಕೆ ಒಟ್ಟು 14.22 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದ್ದು, ಅದನ್ನು ರಾಜ್ಯಗಳಿಗೆ ಹಣಕಾಸು ಆಯೋಗದ ಪ್ರಕಾರ ಹಂಚಿಕೆ ಮಾಡಲಿದೆ. ಬಜೆಟ್ನಲ್ಲಿ ಪ್ರಸ್ತಾಪಿಸಿದಂತೆ 2025-26ನೇ ಸಾಲಿನಲ್ಲಿ 51876.54 ಕೋಟಿ ರೂ. ತೆರಿಗೆ ಪಾಲು ರಾಜ್ಯಕ್ಕೆ ಬರಲಿದೆ. 2024-25ನೇ ಸಾಲಿಗೆ ಹೋಲಿಸಿದಲ್ಲಿ ಶೇ.10ರಷ್ಟು ಹೆಚ್ಚಳವಾದಂತಾಗಲಿದೆ.
ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗುವ ಧ್ಯೇಯಕ್ಕೆ ಅತ್ಯಂತ ಸ್ಪೂರ್ತಿದಾಯಕ ಬಜೆಟ್ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಆಶಯದಂತೆ ದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿ ವಿತ್ತ ಸಚಿವರು ಬಜೆಟ್ ಮಂಡಿಸಿದ್ದಾರೆ ಎಂದರು. ಸರ್ಕಾರ ತನ್ನ ಮೂರನೇ ಅವಧಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿ ಅಭೂತಪೂರ್ವ ಬಜೆಟ್ ಪ್ರಸ್ತುತಪಡಿಸಿದೆ. ಸರ್ವ ಕ್ಷೇತ್ರಕ್ಕೂ ಬಂಪರ್ ಕೊಡುಗೆ ನೀಡಲಾಗಿದೆ ಎಂದರು.
ಕೇಂದ್ರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ, ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಎಂಎಸ್ಪಿ ಬಗ್ಗೆ ಉಸಿರೇ ಬಿಟ್ಟಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಲ್ಲಿ ಒಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ಬಾಯಿ ಬಿಟ್ಟಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆಂಧ್ರಪ್ರದೇಶ, ಬಿಹಾರ ಬಿಟ್ಟು ಎಲ್ಲ ರಾಜ್ಯಗಳಿಗೂ ಅನ್ಯಾಯವಾಗಿದೆ. ಆದಾಯ ತೆರಿಗೆಯ ಮಿತಿ 12 ಲಕ್ಷ ರೂ.ಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇ.6.64ರಷ್ಟಾಗುತ್ತದೆ. 4.90 ಕೋಟಿ ಜನ ಶೂನ್ಯ ತೆರಿಗೆ ಪಾವತಿದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲ್ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನಾ ದಿನದ ಆದಾಯ 100-150 ರೂ. ಹೊಂದಿದ ಶೇ.70 ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದು ವಿಶ್ಲೇಷಿಸಿದರು. ಈ ಸಾಲಿನ 50,65,345 ಕೋಟಿ ರೂ. ಬಜೆಟ್ ಗಾತ್ರದಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಬಡ್ಡಿಗೆ 12,70,000 ಕೋಟಿ ರೂ. ಹೋಗುತ್ತಿದೆ. ನನ್ನ ಅಂದಾಜಿನ ಪ್ರಕಾರ 2026ರ ಮಾರ್ಚ್ ವೇಳೆಗೆ ದೇಶದ ಸಾಲ 202ರಿಂದ 205 ಲಕ್ಷ ಕೋಟಿ ರೂ. ಮುಟ್ಟಬಹುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಿರುವ ವಿಕಸಿತ ಭಾರತದ ಬಜೆಟ್ ಅಲ್ಲ ಇದು ‘ಅವನತಿ ಭಾರತ’ದ ಬಜೆಟ್. ಇಡೀ ದೇಶಕ್ಕೆ ನಿರಾಶದಾಯಕ, ನಷ್ಟದಾಯಕ ಮತ್ತು ಹಾನಿಕಾರಕ ಬಜೆಟ್ ಎಂದು ಟೀಕಿಸಿದರು. ಬಜೆಟ್ನಲ್ಲಿ ಕರ್ನಾಟಕದ ಜನತೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವಿವರವಾದ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದೆ. ಬೇಡಿಕೆಯ ಪಟ್ಟಿಯನ್ನು ಅವರು ಕಣ್ಣೆತ್ತಿ ಕೂಡ ನೋಡಿದ ಹಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈಲ್ವೆ ಯೋಜನೆ ಪ್ರಸ್ತಾಪ ಇಲ್ಲ: ರೈಲ್ವೆ ಯೋಜನೆ ಗಳಿಗೆ ಸಂಬಂಧಿಸಿದ ಭೂಸ್ವಾಧೀನದ ಅರ್ಧದಷ್ಟು ಮತ್ತು ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆ ಕೂಡ ಸಲ್ಲಿಸಿದ್ದೆವು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೊಷಿಸಲಾಗು ವುದು ಎಂಬ ಆಶ್ವಾಸನೆ ಈಡೇರಿಸಿಲ್ಲ. ಯಾವ ನೀರಾವರಿ ಯೋಜನೆಗಳಿಗೂ ಅನುಮತಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಅಭಿವೃದ್ಧಿ, ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವುದು, ರಾಜ್ಯಕ್ಕೆ ಕೇಂದ್ರ ಹಣಕಾಸು ಆಯೋಗವು ಶಿಫಾರಸು ಮಾಡಿದ್ದ ವಿಶೇಷ ಅನುದಾನ 5,495 ಕೋಟಿ ರೂ. ಹಾಗೂ ರಾಜ್ಯ ಕೇಂದ್ರಿತ ಅನುದಾನ 6,000 ಕೋಟಿ ರೂ. ಬಿಡುಗಡೆಗೆ ಕೋರಲಾಗಿತ್ತಾದರೂ ಮನವಿ ಪುರಸ್ಕರಿಸಿಲ್ಲ. ಬೆಂಗಳೂರು ಉಪನಗರ ರೈಲು ಯೋಜನೆಗೆ ನೇರ ಅನುದಾನ ಘೊಷಣೆ ಆಗಿಲ್ಲ. ಬೆಂಗಳೂರು ಮೆಟ್ರೋ ಹಂತ-3 ಮತ್ತು ಫೆರಿಪೆರಲ್ ರಿಂಗ್ರೋಡ್ ಕಾಮಗಾರಿಗೆ ಅನುದಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನು ಕೊಡುಗೆ ಸಿಕ್ಕಿದೆ ಎಂದು ಕೇಂದ್ರ ಮಂತ್ರಿಗಳು, ರಾಜ್ಯದ ಬಿಜೆಪಿ ಸಂಸದರು ಜನತೆಗೆ ಹೇಳಬೇಕು. ನಮ್ಮ ರಾಜ್ಯದ ಶಾಸಕರಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಇಷ್ಟೊಂದು ನಿರಾಸೆ ಉಂಟು ಮಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲಿಯೇ ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಐಟಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ರಾಜ್ಯದ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ. ಚುನಾವಣೆಗಳು ಹತ್ತಿರವಿಲ್ಲದ ಕಾರಣಕ್ಕೆ ಯಾವುದೇ ಯೋಜನೆ ಘೊಷಣೆ ಮಾಡಿಲ್ಲ ಅನಿಸುತ್ತದೆ. 12 ಲಕ್ಷ ಆದಾಯ ಮಿತಿ ಇರುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಕಡಿಮೆ ಜನಕ್ಕೆ ಲಾಭವಾಗಲಿದೆ. ದೇಶದ ಶೇ.5 ಜನ, ಸರ್ಕಾರಿ ಉದ್ಯೋಗ ಇರುವವರು ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ತೆರಿಗೆ ಸ್ಲ್ಯಾಬ್ ತೆಗೆದು ಹಾಕಬೇಕಾಗಿತ್ತು, ಅದು ಆಗಿಲ್ಲ. ಯಾವ ಕ್ಷೇತ್ರಕ್ಕೂ ಅನುಕೂಲವಾಗಿಲ್ಲ. ಕೃಷಿ ಉದ್ಯೋಗ ಹೇಳಿದಂತೆ ಮೂಲಸೌಕರ್ಯಕ್ಕೂ ಉಪಯೋಗವಾಗಿಲ್ಲ.
ಬೆಂಗಳೂರಿಗೆ ಅನುದಾನ ಅವಶ್ಯಕತೆ ಇತ್ತು. ವಾಜಪೇಯಿ ಅವರ ಕಾಲದಲ್ಲಿ ದೇಶವನ್ನು ಬೆಂಗಳೂರು ಮುಖಾಂತರ ನೋಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ಬಾರಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೊಷಣೆ ಮಾಡಿದ್ದರು. ಇದನ್ನು ಕೊಟ್ಟರೆ? ಅದೇ ರೀತಿ ಬೇರೆ ರಾಜ್ಯಗಳಿಗೂ ಆಗಿರಬಹುದು. ಇದು ಸಂಪೂರ್ಣ ರಾಜಕೀಯ ನಿರ್ಧಾರ. ನಾವು ಈ ಮೊದಲೇ ಪ್ರಧಾನಮಂತ್ರಿಗಳಿಗೆ, ವಿತ್ತ ಸಚಿವರಿಗೆ ಕರ್ನಾಟಕದ ಅವಶ್ಯಕತೆಗಳ ಬಗ್ಗೆ ಮನವಿ ಮಾಡಿದ್ದರೂ ಉಪಯೋಗವಾಗಿಲ್ಲ ಎಂದು ಹೇಳಿದ್ದಾರೆ.