ಪರೀಕ್ಷಾ ಅಕ್ರಮಕ್ಕೆ 10 ಕೋಟಿ ರೂ. ದಂಡ!; ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗೆ ಕಠಿಣ ಕಾಯ್ದೆ; ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ

Exam Fraud
ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರನ್ನು ಮಟ್ಟಹಾಕಲು ಕಾನೂನು ಸಂಕೋಲೆ ಬಿಗಿಗೊಳ್ಳುವ ಕಾಲ ಸನ್ನಿಹಿತವಾಗಿದೆ. ಪರೀಕ್ಷಾ ಅಕ್ರಮದ ಕಿಂಗ್​ಪಿನ್ ಆರ್.ಡಿ. ಪಾಟೀಲ ಅಥವಾ ಇವನಂಥ ಯಾವುದೇ ಮಧ್ಯವರ್ತಿಗಳ ಮೇಲಿನ ಆರೋಪ ಸಾಬೀತಾದಲ್ಲಿ ರಾಜ್ಯ ಸರ್ಕಾರ ತರಲು ಹೊರಟಿರುವ ಹೊಸ ಕಾಯ್ದೆ ಪ್ರಕಾರ 10 ಕೋಟಿ ರೂ. ವರೆಗೆ ದಂಡ ಹಾಗೂ ಜೈಲು ಶಿಕ್ಷೆ ಕಾದಿದೆ!

ನ.16ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆ ಪಡೆದಿದ್ದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಉಭಯ ಸದನಗಳ ಅಂಗೀಕಾರದ ಬಳಿಕ ಹೊಸ ಕಾಯ್ದೆ ಜಾರಿಗೆ ಬರಲಿದ್ದು, ಅದರ ಪ್ರಕಾರ ಪರೀಕ್ಷಾ ಅಕ್ರಮದ ದುಷ್ಕೃತ್ಯ ನಡೆಸುವವರಿಗೆ ಭಾರಿ ಶಿಕ್ಷೆ ಕಾದಿದೆ. ಅಭ್ಯರ್ಥಿಯೇ ಅಕ್ರಮ ನಡೆಸಿದಲ್ಲಿ ಎರಡು ವರ್ಷ ಪರೀಕ್ಷೆಗೆ ಹಾಜರಾಗುವುದರಿಂದ ನಿರ್ಬಂಧ, ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯೂ ಭಾಗಿಯಾಗಿದ್ದಲ್ಲಿ ಮುಖ್ಯಸ್ಥರ ವಿರುದ್ಧವೇ ಶಿಸ್ತುಕ್ರಮ ಹಾಗೂ ಮಧ್ಯವರ್ತಿಗಳಿಗೆ 10 ಕೋಟಿ ರೂ. ವರೆಗೆ ದಂಡ ಹಾಗೂ ಜೈಲು ಶಿಕ್ಷೆ ನೀಡಬಹುದಾದ ಅವಕಾಶ ಈ ಕಾಯ್ದೆಯಲ್ಲಿ ಇರಲಿದೆ.

ಕಳೆದ 2-3 ವರ್ಷಗಳಲ್ಲಿ ಪಿಎಸ್​ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್​ಡಿಎ ಸೇರಿ ಹಲವು ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಹಳೇ ಆರೋಪಿಗಳೇ ಸಿಕ್ಕಿ ಬೀಳುತ್ತಿದ್ದಾರೆ. ಇದಕ್ಕೆಲ್ಲ ನಿಯಂತ್ರಣ ಹಾಕುವುದಕ್ಕೆ ಸರ್ಕಾರ ಕಾಯ್ದೆ ಅಸ್ತ್ರ ಸಿದ್ಧಪಡಿಸಿದೆ.

ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಒಮ್ಮೆಗೆ ಅಲ್ಲದಿದ್ದರೂ ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ. ಗ್ಯಾರಂಟಿಗಳ ಅಬ್ಬರದ ನಡುವೆಯೂ ಸಣ್ಣ ಪ್ರಮಾಣದಲ್ಲಿ ನೇಮಕಾತಿ ಆರಂಭವಾಗಿದೆ. ಸರ್ಕಾರದ ಹುದ್ದೆಗಳು ಅರ್ಹರಿಗೆ ಸಿಗಬೇಕೆಂಬುದು ಪ್ರಮುಖ ಉದ್ದೇಶವಾಗಿದೆ. ಕಳೆದ ವರ್ಷ ನಡೆದ ಪಿಎಸ್​ಐ ಹುದ್ದೆಯ ಪರೀಕ್ಷೆ ಸಂದರ್ಭದಲ್ಲಿ ಅಕ್ರಮಗಳ ಬ್ರಹ್ಮಾಂಡ ಸ್ವರೂಪ ಬಯಲಿಗೆ ಬಂದಿದೆ. ಇಂತಹ ಅಕ್ರಮಗಳಿಂದ ವರ್ಷಾನುಗಟ್ಟಲೆ ಪರೀಕ್ಷೆಗೆ ತಯಾರಿ ನಡೆಸಿರುವ ಪ್ರಾಮಾಣಿಕ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಾರೆ. ಅರ್ಹರಿಗೆ ಸರ್ಕಾರಿ ನೌಕರಿ ಸಿಗುವಂತಾಗಲಿ ಎಂಬ ಕಾರಣಕ್ಕೆ ಕಾಯ್ದೆ ತರಲಾಗುತ್ತಿದೆ.

ಸ್ವಾಯತ್ತ ಸಂಸ್ಥೆಗಳಿಗೂ ಅನ್ವಯ: ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರವಲ್ಲ ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮತ್ತು ಮಂಡಳಿಗಳು, ನ್ಯಾಯಾಲಯಗಳ ನೇಮಕಕ್ಕೆ ನಡೆಯುವ ಎಲ್ಲ ಪರೀಕ್ಷೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ.

ಎರಡು ವರ್ಷ ನಿರ್ಬಂಧ: ಯಾವುದೇ ಪರೀಕ್ಷಾರ್ಥಿ ಅನಧಿಕೃತವಾಗಿ ಯಾವುದೇ ವ್ಯಕ್ತಿಯಿಂದ, ಗುಂಪಿನಿಂದ, ಲಿಖಿತ ಮಾಹಿತಿಗಳಿಂದ, ರೇಕಾರ್ಡಿಂಗ್ ಮೂಲಕ, ವಿದ್ಯುನ್ಮಾನ ಉಪಕರಣಗಳಿಂದ ನೆರವು ಪಡೆಯುವುದು ಸಹ ಪರೀಕ್ಷಾ ಅಕ್ರಮವೇ ಆಗಿರುತ್ತದೆ. ಪರೀಕ್ಷಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೇಗೆ ಪ್ರವೇಶ ಪಡೆಯಬೇಕು ಎಂಬ ಬಗ್ಗೆಯೂ ಕಾಯ್ದೆಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದರೆ ಎರಡು ವರ್ಷಗಳ ಕಾಲ ಯಾವುದೇ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಬರುವ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ಹೇಗೆ ಸರಬರಾಜು ಮಾಡಬೇಕೆಂಬ ಬಗ್ಗೆಯೂ ತಿಳಿಸಲಾಗಿದೆ.

ಆಡಳಿತ ಮಂಡಳಿ ಭಾಗಿಯಾದರೆ?: ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರವೇ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು. ಆದ್ದರಿಂದ ಕಾಯ್ದೆಯಲ್ಲಿ ಆಡಳಿತ ಮಂಡಳಿಗಳು ಅಕ್ರಮದಲ್ಲಿ ಭಾಗಿಯಾದರೆ ಅದರ ಮುಖ್ಯಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಐದು ವರ್ಷಗಳ ತನಕ ವಿಸ್ತರಿಸಬಹುದಾದ ಜೈಲು ಶಿಕ್ಷೆಯ ಜತೆಗೆ ಹತ್ತು ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದಂತೆ ದಂಡ ವಿಧಿಸುವುದಕ್ಕೆ ಅವಕಾಶ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮವಾಗಿ ಪರೀಕ್ಷೆ ಸ್ಥಗಿತಗೊಂಡರೆ ಅದಕ್ಕಾದ ವೆಚ್ಚವನ್ನು ಆಡಳಿತ ಮಂಡಳಿಗಳೇ ಭರಿಸಬೇಕು.

ಮಧ್ಯವರ್ತಿಗಳಿಗೆ ಭಾರಿ ಶಿಕ್ಷೆ: ಪರೀಕ್ಷೆ ಅಕ್ರಮಗಳಲ್ಲಿ ಭಾಗಿಯಾಗುವ ಮಧ್ಯವರ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ದಂಡ ಮತ್ತು ಶಿಕ್ಷೆಯನ್ನು ವಿಧಿಸುವ ಬಗ್ಗೆ ಕಾಯ್ದೆಯಲ್ಲಿ ವಿವರಿಸಲಾಗಿದೆ. ಎಂಟು ವರ್ಷಗಳಿಗೆ ಕಡಿಮೆ ಇಲ್ಲದ ಹನ್ನೆರಡು ವರ್ಷಗಳ ತನಕ ವಿಸ್ತರಣೆ ಮಾಡಬಹುದಾದ ಕಾರಾಗೃಹ ವಾಸ, ಹದಿನೈದು ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದಂತೆ ಹತ್ತು ಕೋಟಿ ರೂ.ಗಳ ತನಕ ದಂಡ ವಿಧಿಸಬಹುದಾಗಿದೆ. ದಂಡ ಪಾವತಿಗೆ ವಿಫಲವಾದರೆ ಮತ್ತೆ ಎರಡು ವರ್ಷ ಜೈಲು ಶಿಕ್ಷೆ. ಮಧ್ಯವರ್ತಿಗೆ ಮಾತ್ರವಲ್ಲದೇ ಪರೀಕ್ಷಾರ್ಥಿಗೂ ಶಿಕ್ಷೆಗಳು ಅನ್ವಯವಾಗಲಿವೆ.

ಆಸ್ತಿ ಮುಟ್ಟುಗೋಲು: ಪರೀಕ್ಷಾ ಅಕ್ರಮಗಳಿಗೆ ಕಾರಣವಾಗುವವರ ಸ್ಥಿರ ಮತ್ತು ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ತನಿಖಾಧಿಕಾರಿಗಳು ಆಸ್ತಿ ಮುಟ್ಟುಗೋಲು ಹಾಕಿಕೊಂಡ 48 ಗಂಟೆಗಳಲ್ಲಿ ಸಂಬಂಧಿಸಿದ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗುತ್ತದೆ.

ರಾಷ್ಟ್ರಪತಿ ಒಪ್ಪಿಗೆ ಬೇಡ: ಈ ವಿಧೇಯಕ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 41 ನೇ ನಮೂನೆಯಡಿ ಬರುತ್ತದೆ. ಕೇಂದ್ರದ ಯಾವುದೇ ಕಾಯ್ದೆಗೆ ವ್ಯತಿರಿಕ್ತವೇನಿಲ್ಲ. ವಿಧಾನಮಂಡಲದಲ್ಲಿ ಸಿಗುವ ಒಪ್ಪಿಗೆ ಸಾಕು. ರಾಷ್ಟ್ರಪತಿ ಅವರ ಅನುಮೋದನೆಯ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ವ್ಯಾಪಕ ಚರ್ಚೆಯ ನಂತರ ಕಾನೂನು ಸಚಿವ ಎಚ್.ಕೆ. ಪಾಟೀಲ ನೇತೃತ್ವದ ಪರಿಶೀಲನಾ ಸಮಿತಿ ಒಪ್ಪಿಗೆ ನೀಡಿದೆ.

ಸರ್ಕಾರದ ಹುದ್ದೆಗಳ ನೇಮಕದ ಸಂದರ್ಭದಲ್ಲಿ ಅಕ್ರಮ, ಅವ್ಯವಹಾರವನ್ನು ತಡೆಗಟ್ಟಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದೂ ನಮ್ಮ ಆದ್ಯತೆಯಾಗಿದೆ. | ಸಿದ್ದರಾಮಯ್ಯ, ಮುಖ್ಯಮಂತ್ರಿ

ಜಾಮೀನುರಹಿತ ಅಪರಾಧ

ಪಿಎಸ್​ಐ ಸೇರಿ ವಿವಿಧ ಹುದ್ದೆಗಳ ನೇಮಕಕ್ಕೆ ಪರೀಕ್ಷೆಗಳು ನಡೆದಾಗ ಅಕ್ರಮಗಳಾಗಿದ್ದವು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ ಖಾಸಗಿ ವಿಧೇಯಕ ಮಂಡನೆಗೆ ಮುಂದಾಗಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಯ್ದೆಯೊಂದನ್ನು ರೂಪಿಸುವ ಕುರಿತು ವ್ಯಾಪಕ ಚರ್ಚೆಗಳಾದವು. ಅಂತಿಮವಾಗಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಪರೀಕ್ಷೆಗೆ ಸಂಬಂಧಿ ಸಿದ ಎಲ್ಲ ಅಕ್ರಮಗಳನ್ನು ಜಾಮೀನುರಹಿತ ಪ್ರಕರಣಗಳೆಂದೇ ಪರಿಗಣಿಸಲಾಗುತ್ತದೆ. ಪರೀಕ್ಷಾ ಅಕ್ರಮಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಕಾನೂನಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net