

ಪಿರಿಯಾಪಟ್ಟಣ: ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಮತ್ತು ಬೃಹತ್ ಜಾಗೃತಿ ಸಮಾವೇಶಕ್ಕೆ ಆರ್ಯ ಈಡಿಗರ ಸಮಾಜದ ಶ್ರೀ ರೇಣುಕಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆಯನ್ನು ಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಸಲಾಯಿತು.
ಸಭೆಯಲ್ಲಿ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ, ಈಡಿಗ ಮತ್ತು ಸುಮಾರು 25 ಒಳ ಪಂಗಡಗಳ ಬೃಹತ್ ಜಾಗೃತಿ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.10 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ಮತ್ತು ಸಾಮಾಜಿಕ ನ್ಯಾಯ ಪಡೆಯಲು ಈ ಸಮಾವೇಶ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಮಾತನಾಡಿ, ರಾಜ್ಯದಲ್ಲಿ ಈಡಿಗ ಸಮುದಾಯವು ಹಲವು ಪಂಗಡಗಳ ಹೆಸರಿನಲ್ಲಿ ಹರಿದು ಹಂಚಿಹೋಗಿದ್ದು ಸುಮಾರು 25 ಒಳಪಂಗಡಗಳನ್ನು ಒಳಗೊಂಡಿದೆ. ಈಡಿಗ, ಬಿಲ್ಲವ, ಪೂಜಾರಿ, ದೀವರ, ಬಂಡಾರಿ, ಬೆಲ್ಲದ್, ಹಾಲಕ್ಷತ್ರಿಯ, ದೇಶಭಂಡಾರಿ, ದೇವರ, ದೇವರ ಮಕ್ಕಳು, ನಾಮಧಾರಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಎಲ್ಲ ಪಂಗಡಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾದ್ಯಂತ ಪ್ರವಾಸ ಕೈಗೊಂಡಿದ್ದು ಈಡಿಗ ಸಮುದಾಯದ ಪಿರಿಯಾಪಟ್ಟಣ ತಾಲೂಕಿನ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕು ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಪಿ.ವೈ.ಮಲ್ಲೇಶ್ ಮಾತನಾಡಿ, ಸಮಾವೇಶಕ್ಕೆ ತೆರಳಲು ಪಟ್ಟಣದಿಂದ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ಆರ್ಯ ಈಡಿಗರ ಸಂಘದ ತಾಲೂಕು ಉಪಾಧ್ಯಕ್ಷರಾದ ಸಿ.ಎನ್.ನಾರಾಯಣ್, ಪಿ.ಟಿ.ಮಹದೇವ್, ಕಾರ್ಯದರ್ಶಿ ನಿಂಗರಾಜು, ಖಜಾಂಚಿ ಅಕ್ಷಯ ಕಾಂತರಾಜು, ಮುಖಂಡರಾದ ಪ್ಲೈವುಡ್ ರಾಜಣ್ಣ, ನಾಗರಾಜು, ನಂಜುಂಡ, ಎಂ.ಎಸ್.ಮಲ್ಲೇಶ್, ಪಿ.ಎಂ.ಸತೀಶ್, ಪಿ.ಎಂ.ಗಿರೀಶ್, ಉಮೇಶ್, ಲಾಟರಿ ಕುಮಾರ್, ರಾಶಿ, ಪಿ.ಟಿ.ಕುಮಾರ್ ಮತ್ತಿತರರು ಹಾಜರಿದ್ದರು.