ಹೆಮ್ಮೆಯ ಕ್ಷಣಕ್ಕೆ 1ಲಕ್ಷ ಜನ ಸಾಕ್ಷಿ ಸಾಧ್ಯತೆ; ಕಲ್ಪತರುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

03Tmk_MODI_BJP_PC
Published on

 ತುಮಕೂರು: ದೇಶದಲ್ಲೇ ಅತಿದೊಡ್ಡ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರಮೋದಿ ಭಾಗವಹಿಸಲಿರುವ ಐತಿಹಾಸಿಕ ಕಾರ್ಯಕ್ರಮವನ್ನು 1 ಲಕ್ಷ ಜನರು ಸಾಕ್ಷೀಕರಿಸಲಿದ್ದಾರೆ.

ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ 2016ರಲ್ಲಿ ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ೆ.6ರಂದು ಮೋದಿ ಅವರೇ ಆಗಮಿಸುತ್ತಿರುವುದು ವಿಶೇಷ ಎನಿಸಿದೆ.

ಇದು ಜಿಲ್ಲೆಗೆ ಹೆಮ್ಮೆಯ ಕ್ಷಣವೆನಿಸಿದ್ದು, ಪ್ರತೀ ತಾಲೂಕಿನಿಂದಲೂ 5 ಸಾವಿರದಂತೆ ಒಟ್ಟು 50 ಸಾವಿರ ಜನರನ್ನು ಕರೆತರುವ ಮೂಲಕ ಅಭೂತಪೂರ್ವ ಕಾರ್ಯಕ್ರಮದ ಭಾಗವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಗತ್ತಿನ 35ನೇ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಚ್‌ಎಎಲ್ ಘಟಕದ ಉದ್ಘಾಟನೆ ಜತೆಗೆ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕಿನ ಮನೆ ಮನೆಗೆ ಗಂಗೆ ಹರಿಸುವ 900 ಕೋಟಿ ಮೊತ್ತದ ಜಲಜೀವನ್ ಮಿಷನ್ ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಲಿದ್ದಾರೆ. ಇವರೆಡು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾದರೂ ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಿಂದ ಸ್ವಯಂಪ್ರೇರಿತರಾಗಿ ಜನರು ಭಾಗವಹಿಸುತ್ತಿದ್ದಾರೆ. ಇದಲ್ಲದೆ ಪಕ್ಷದ ವತಿಯಿಂದ ವಾಹನ ವ್ಯವಸ್ಥೆ ಮಾಡಿದ್ದು, 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು.

ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್, ಸಹವಕ್ತಾರ ಟಿ.ಜೆ.ಸನತ್ ಇದ್ದರು.

60 ನಿಮಿಷಗಳ ಕಾರ್ಯಕ್ರಮ: ಫೆ.6 ರಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ಎಚ್‌ಎಎಲ್ ಘಟಕ ಉದ್ಘಾಟನೆ ಮಾಡಲಿದ್ದಾರೆ. 60 ನಿಮಿಷಗಳ ಉದ್ಘಾಟನೆ ಸಮಾರಂಭದಲ್ಲಿ ಮೋದಿ ಜತೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್, ರಾಜ್ಯಪಾಲ ಥಾವರಚಂದ್ ಗೆಹಲೋತ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ರಾಜ್ಯ ಸಚಿವ ಅಜಯ್ ಭಟ್, ಸಂಸದ ಜಿ.ಎಸ್.ಬಸವರಾಜು ವೇದಿಕೆ ಹಂಚಿಕೊಳ್ಳಲಿದ್ದಾರೆ. ಮೋದಿ 35 ನಿಮಿಷ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಸ್ಪಿಜಿ ನೇತೃತ್ವದಲ್ಲಿ ಭದ್ರತೆ ಇರಲಿದೆ.

ಎಚ್‌ಎಎಲ್ ಘಟಕ ನಿರ್ಮಾಣದಿಂದ ತುಮಕೂರು ಜಿಲ್ಲೆಯು ಜಗತ್ತಿನ ಭೂಪಟದಲ್ಲಿ ಸ್ಥಾನ ಪಡೆದಿದೆ. ಗುಬ್ಬಿಯ ಎಚ್‌ಎಎಲ್ ಘಟಕವು ಆತ್ಮನಿರ್ಭರ ಯೋಜನೆಯ ಭಾಗವಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಿಲ್ಲೆಯ ಎಲ್ಲೆಡೆಯಿಂದ ಬರುವ ಕಾರ್ಯಕರ್ತರು, ಸಾರ್ವಜನಿಕರಿಗೆ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. | ಎಚ್.ಎಸ್.ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ

6ಕ್ಕೆ ಎಚ್‌ಎಎಲ್ ಘಟಕ ಉದ್ಘಾಟನೆ

ತುಮಕೂರು: ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಫೆ.6ರಂದು ಎಚ್‌ಎಎಲ್ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಆಗಲಿದ್ದು, ಸಮಾರಂಭಕ್ಕೆ ರಕ್ಷಣಾ ಇಲಾಖೆ ಸೂಚನೆಗಳಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಷಹಪುರವಾಡ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಂಗಳವಾರ ಘಟಕದಲ್ಲಿ ಪರಿಶೀಲನೆ ನಡೆಸಿದರು.

ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ, ಘಟಕದ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದು, ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಕೇಂದ್ರ ರಕ್ಷಣಾ ಸಚಿವರು, ಸಹಾಯಕ ರಕ್ಷಣಾ ಸಚಿವರು, ರಾಜ್ಯ ರಕ್ಷಣಾ ಸಚಿವರು, ರಾಜ್ಯಪಾಲರು, ಸಿಎಂ ಹಾಗೂ ರಾಜ್ಯದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 1500ಕ್ಕೂ ಹೆಚ್ಚು ಮಂದಿ ಗಣ್ಯರು ಆಗಮಿಸುವ ಸಾಧ್ಯತೆಯಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಬಸ್, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ಘಟಕದ ಉದ್ಘಾಟನೆ ಬಳಿಕ ಜಲಜೀವನ್ ಮಿಷನ್ ಯೋಜನೆಯ ಮನೆಮನೆ ಗಂಗೆ ಕಾರ್ಯಕ್ರಮಕ್ಕೆ ಪ್ರಧಾನಿ ಶಂಕುಸ್ಥಾಪನೆಯನ್ನೂ ನೆರವೇರಿಸುವ ಬಗ್ಗೆಯಷ್ಟೇ ಪ್ರಧಾನಿ ಕಚೇರಿಯಿಂದ ಮಾಹಿತಿ ಸಿಕ್ಕಿದೆ ಎಂದರು.

ಫೆ.6ರಂದು ಮಧ್ಯಾಹ್ನ 1ರಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜನರನ್ನು ಬಿಡಲಾಗುತ್ತದೆ, 2.30ರೊಳಗೆ ಎಲ್ಲರೂ ಒಳಗೆ ಸೇರಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ನೀರು, ಬ್ಯಾಗ್‌ಗಳು, ಪ್ಲಾಸ್ಟಿಕ್ ಕವರ್ ಸೇರಿ ಇತರ ಯಾವುದೇ ವಸ್ತುಗಳನ್ನು ತರುವಂತಿಲ್ಲ ಎಂದು ಮನವಿ ಮಾಡಲಾಗಿದೆ.

ಶೋಭಾಯಾತ್ರೆ, ಬೈಕ್ ರ‌್ಯಾಲಿಗೆ ಸಜ್ಜು: ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಕುಣಿಗಲ್, ತಿಪಟೂರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್ ರ‌್ಯಾಲಿಗಳ ಮೂಲಕ ನಿಟ್ಟೂರಿನ ಬಿದರೆಹಳ್ಳಕಾವಲ್‌ನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಎಚ್.ಎಸ್.ರವಿಶಂಕರ್ ತಿಳಿಸಿದರು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಘೋಷಣೆ ಆಗಿತ್ತು. ಮೋದಿ ಪ್ರಧಾನಿ ಆದ ಬಳಿಕ 2016ರಲ್ಲಿ ಶಂಕಸ್ಥಾಪನೆ ನೆರವೇರಿಸಿ ಈಗ ಉದ್ಘಾಟನೆಗೂ ಕಾಲಕೂಡಿ ಬಂದಿದೆ. ಎಚ್‌ಎಎಲ್ ಅನುಷ್ಠಾನಕ್ಕೆ ಸಾಕಷ್ಟು ಶ್ರಮಿಸಿದ್ದೇನೆ. ಸ್ಥಳೀಯರಿಗೆ ಉದ್ಯೋಗ ಕೊಡುವಂತೆ ರಕ್ಷಣಾ ಸಚಿವರಲ್ಲಿ ಮನವಿ ಮಾಡುವೆ. |ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net