ಫಲಾನುಭವಿಗಳಿಂದ 1 ಲಕ್ಷ ವಂತಿಗೆ ಕಡ್ಡಾಯ

cm siddaramaiah
ಸಿಎಂ ಸಿದ್ದರಾಮಯ್ಯ
Published on

ಬೆಂಗಳೂರು: ಸರ್ವರಿಗೂ ಸೂರು ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸಿ ಹಂತಹಂತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಿರ್ಮಾಣದ ವಿವಿಧ ಹಂತದಲ್ಲಿ ಇರುವ 1,29,457 ಮನೆಗಳಿಗೆ ಎಷ್ಟು ಹಣಕಾಸು ಬೇಕಾಗುತ್ತದೆ, ಈ ವರ್ಷ ಗರಿಷ್ಠ ಎಷ್ಟು ಕೊಡಬಹುದು, ಮುಂದಿನ ವರ್ಷ ಎಷ್ಟು ಕೊಡಬಹುದು ಪರಿಶೀಲನೆ ಮಾಡುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಜತೆಗೆ ಫಲಾನುಭವಿಗಳಿಂದ ಒಂದು ಲಕ್ಷ ರೂ. ಕಡ್ಡಾಯವಾಗಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು. ಈ ಕುರಿತು ಅಗತ್ಯಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದರು.

ಸರ್ವರಿಗೂ ಸೂರು ಯೋಜನೆಯಡಿಯಲ್ಲಿ 2013 ರಿಂದ 2023 ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿ ಮಾಡಲು ಸಾಧ್ಯ ವಾಗದೆ 2.32 ಲಕ್ಷ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿತು. ಹೀಗಾಗಿ ಪ್ರತಿ ಕುಟುಂಬದ ಫಲಾನುಭವಿ ವಂತಿಗೆ ನಾಲ್ಕು ಲಕ್ಷ ರೂ. ಸರ್ಕಾರವೇ ಭರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.

ಈ ಮೊದಲು ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಗೆ ಅನುಮತಿ ದೊರೆತಿತ್ತು. ಬುಧವಾರದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಅನ್ವಯ ಮಾಡಲು ತಾತ್ವಿಕ ಒಪ್ಪಿಗೆ ದೊರೆಯಿತು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39, 966 ಮನೆ ಹಂಚಿಕೆಗೆ ಸಿದ್ಧವಿದ್ದು 862 ಕೋಟಿ ರೂ. ಅಗತ್ಯವಿದೆ. ಅದೇ ರೀತಿ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ಧವಿದ್ದು 1,879 ಕೋಟಿ ರೂ. ಅಗತ್ಯವಿದೆ ಎಂದು ಸಚಿವರು ಸಭೆಯಲ್ಲಿ ವಿವರಿಸಿದರು.

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅತೀಕ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಹೌಸಿಂಗ್ ಬೋರ್ಡ್ ಅಧ್ಯಕ್ಷ ಶಿವಲಿಂಗೇ ಗೌಡ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net