ಅಕ್ರಮ ಮಣ್ಣು ಸಾಗಣೆಗೆ 1 ಲಕ್ಷ ದಂಡ

thotli
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಸಮೀಪದ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ಟಿಪ್ಪರ್​ಅನ್ನು ವಶಪಡಿಸಿಕೊಂಡರು.
Published on

ಕೋಲಾರ: ತಾಲೂಕಿನ ತೊಟ್ಲಿ ಗ್ರಾಮ ಸಮೀಪದ ಅಣ್ಣಿಕೆರೆಯಲ್ಲಿ ಬುಧವಾರ ರಾತ್ರಿ ಅಕ್ರಮವಾಗಿ ಮಣ್ಣು ಅಗೆಯುತ್ತಿರುವುದನ್ನು ಗ್ರಾಮಸ್ಥರು ಪತ್ತೆ ಹಚ್ಚಿ, ಮಣ್ಣು ತೆಗೆಯುತ್ತಿದ್ದವರಿಂದ 1 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ನಿತ್ಯ ರಾತ್ರಿ ವೇಳೆ ಬಂದು ಕೆರೆಯಲ್ಲಿನ ಮಣ್ಣು ಅಗೆದು ಟಿಪ್ಪರ್​ಗಳಲ್ಲಿ ಸಾಗಣೆ ಮಾಡುತ್ತಿದ್ದರು. ಮಾಹಿತಿ ತಿಳಿದ ಗ್ರಾಮಸ್ಥರು ಎಷ್ಟು ಸಾರಿ ಹೋಗಿ ನೋಡುತ್ತಿದ್ದರೂ ದೊರೆಯುತ್ತಿರಲಿಲ್ಲ. ಬುಧವಾರ ರಾತ್ರಿ ಗುಂಪುಕಟ್ಟಿಕೊಂಡು ಕೆರೆಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ಜೆಸಿಬಿ, ಟಿಪ್ಪರ್​ಗಳ ಮೂಲಕ ಆಗಮಿಸಿ ಮಣ್ಣು ತೆಗೆಯಲು ಮುಂದಾದಾಗ ಗ್ರಾಮಸ್ಥರು ಮೂರು ಟಿಪ್ಪರ್​ ಹಾಗೂ ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮಣ್ಣುಗಾರಿಕೆ ತಡೆಯುವಂತೆ ಗಣಿ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ. ಹೀಗಾಗಿ, ಗ್ರಾಮಸ್ಥರೇ ಕೆರೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಆರೋಪಿಗಳನ್ನು ಹಿಡಿದ ಗ್ರಾಮಸ್ಥರು, ದೇಗುಲದ ಅಭಿವೃದ್ಧಿಗೆ 1 ಲಕ್ಷವನ್ನು ಪಾವತಿಸುವಂತೆ ಹೇಳಿದ್ದಾರೆ. ಅದರಂತೆ 1 ಲಕ್ಷ ನೀಡಿರುವ ಆರೋಪಿಗಳು, ಇನ್ನುಮುಂದೆ ಇಂಥ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. ಹೀಗಾಗಿ, ಗ್ರಾಮಸ್ಥರು ವಾಹನಗಳನ್ನು ಬಿಟ್ಟು ಕಳುಹಿಸಿದ್ದಾರೆ.

ಹಗಲು, ರಾತ್ರಿ ಎನ್ನದೆ ಜೆಸಿಬಿಯನ್ನು ಕೆರೆಯೊಳಗಿಳಿಸಿ ಮಣ್ಣನ್ನು ಬಗೆದು ಟಿಪ್ಪರ್​ನಲ್ಲಿ ಸಾಗಿಸುವುದು ತೊಟ್ಲಿ, ಆಲೇರಿ, ಮೂರಂಡಹಳ್ಳಿ ಭಾಗದಲ್ಲಿ ಕಂಡುಬರುತ್ತಿದೆ. ಇದರಿಂದ ಕೆರೆಯ ಸ್ವರೂಪಕ್ಕೆ ಧಕ್ಕೆ ಉಂಟಾಗುತ್ತಿದೆ. ಮಣ್ಣು ತೆಗೆಯುವವರೊಂದಿಗೆ ಅಧಿಕಾರಿಗಳೇ ಶಾಮೀಲು ಆಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರಿಯಾಗಿ ರಾಜಧನ ಪಾವತಿಸಿಕೊಳ್ಳದೆ ಮಣ್ಣು ಅಗೆಯಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net