ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಉಗ್ರರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ; ಗುಂಡಿನ ಕಾಳಗದಲ್ಲಿ ಸಿಆರ್​ಪಿಎಫ್​ ಯೋಧನೋರ್ವ ಹುತಾತ್ಮ

Terror 5 Feb 20
Published on

ಶ್ರೀನಗರ: ಇಲ್ಲಿನ ಹೊರವಲಯದ ಲಾವಯ್​ಪೋರಾದಲ್ಲಿ ಉಗ್ರರು ಹಾಗೂ ರಕ್ಷಣಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದು ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.

ಆ ಪ್ರದೇಶವನ್ನು ಪೊಲೀಸ್​ ಹಾಗೂ ಸೇನಾ ಸಿಬ್ಬಂದಿ ಸಂಪೂರ್ಣ ಸುತ್ತುವರಿದಿದ್ದಾರೆ. ಇನ್ನೋರ್ವ ಉಗ್ರನನ್ನು ಬಂಧಿಸಲಾಗಿದೆ.

ಉಗ್ರರು ದ್ವಿಚಕ್ರವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಮಾಡುತ್ತಿದ್ದರು. ಅವರನ್ನು ಪೊಲೀಸರು ಹಾಗೂ ಸಿಆರ್​ಪಿಎಫ್​ ಯೋಧರು ಜಂಟಿ ಕಾರ್ಯಾಚರಣೆಯಲ್ಲಿ ತಡೆದಿದ್ದಾರೆ. ಆಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಸಿಆರ್​ಪಿಎಫ್​ನ ಯೋಧ ಮೃತಪಟ್ಟಿದ್ದಾರೆ. ಪ್ರತಿ ದಾಳಿ ನಡೆಸಿದ ರಕ್ಷಣಾ ಸಿಬ್ಬಂದಿಯ ಗುಂಡಿಗೆ ಇಬ್ಬರು ಉಗ್ರರು ಸತ್ತಿದ್ದಾರೆ. ಇನ್ನೋರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯಿಂದಾಗಿ ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಇನ್ನೂ ಹೆಚ್ಚಿನ ಉಗ್ರರು ಸ್ಥಳದಲ್ಲಿ ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಅವರನ್ನು ಹುಡುಕಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್​ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಶ್ರೀನಗರದಲ್ಲಿ ನಡೆದ ಮೊದಲ ಎನ್​ಕೌಂಟರ್ ಇದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net