ಟ್ರೇಡಿಂಗ್ ಸೋಗಿನಲ್ಲಿ 1.96 ಕೋಟಿ ಧೋಖಾ

cyber crime
Published on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಟ್ರೇಡಿಂಗ್ ವ್ಯವಹಾರದ ಜಾಹೀರಾತು ನೋಡಿ 1.96 ಕೋಟಿ ರೂ. ಅನ್ನು ನಿವೃತ್ತ ಅಧಿಕಾರಿ ಹೂಡಿಕೆ ಮಾಡಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ.

ಚಿಕ್ಕಲ್ಲಸಂದ್ರದ ನರಸಿಂಹಮೂರ್ತಿ ವಂಚನೆಗೆ ಒಳಗಾದವರು. ಇವರು ದಕ್ಷಿಣ ವಿಭಾಗ ಸಿಇಎನ್ ಠಾಣೆಗೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಜಾಲತಾಣದಲ್ಲಿ ಪ್ರಕಟವಾಗಿದ್ದ ಗಿವಿಂಗ್ ಬ್ಯಾಕ್ ಸ್ಟಾಕ್ ಟ್ರೇನಿಂಗ್ 13 ಗ್ರೂಪ್ ಎಂಬ ಜಾಹೀರಾತು ನೋಡಿ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿದ್ದರು. ಅದರಲ್ಲಿ ಟ್ರೇಡಿಂಗ್ ವ್ಯವಹಾರಗಳ ಕುರಿತು ಸಂಜೀವ್ ದಾಸ್ ಎಂಬಾತ ತರಬೇತಿ ನೀಡಿದ್ದ. ಬಳಿಕ ಇಂಡಿಯನ್ ಸ್ಟಾಕ್ ಮಾರ್ಕೆಟ್ ಮತ್ತು ಐಪಿಒ ಷೇರ್‌ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ್ದ. ನರಸಿಂಹಮೂರ್ತಿ ಅದಕ್ಕೆ ಒಪ್ಪಿದಾಗ ಅವರ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿಸಿ ಅಪ್ಲಿಕೇಷನ್ ಡೌನ್‌ಲೋಡ್‌ಗೆ ಲಿಂಕ್ ಕಳುಹಿಸಿದ್ದರು.

ದೂರುದಾರರು ತಮ್ಮ ಮೊಬೈಲ್‌ನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಮೊದಲು 1 ಲಕ್ಷ ರೂ. ಹೂಡಿಕೆ ಮಾಡಿದ್ದರು. 1 ಲಕ್ಷ ರೂ.ಗೆ ಪ್ರತಿಯಾಗಿ ಹೆಚ್ಚಿನ ಲಾಭಾಂಶ ಲಭ್ಯ ಆಗಿರುವುದಾಗಿ ತೋರಿಸಿತ್ತು. ಆಸೆಗೆ ಬಿದ್ದ ನರಸಿಂಹಮೂರ್ತಿ, ಹಂತ ಹಂತವಾಗಿ 1.96 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ತನ್ನ ಖಾತೆಯಲ್ಲಿ ಇರುವ ಲಾಭಾಂಶವವನ್ನು ವಿತ್‌ಡ್ರಾ ಮಾಡಲು ಹೋದಾಗ ಸಾಧ್ಯವಾಗಿಲ್ಲ.

ಈ ಬಗ್ಗೆ ಕಾಲ್ ಮಾಡಿ ವಿಚಾರಿಸಿದಾಗ ಲಾಭ ಪಡೆಯಬೇಕಾದರೆ ಶುಲ್ಕ ಪಾವತಿ ಮಾಡಬೇಕೆಂದು ಹೇಳಿದ್ದರು. ಅನುಮಾನ ಬಂದು ಪಾವತಿ ಮಾಡುವುದಿಲ್ಲ ಎಂದಾಗ ಅಪ್ಲಿಕೇಷನ್ ಸರ್ವರ್ ಸ್ಥಗಿತ ಮಾಡಿ ಸಂಪರ್ಕ ಕಡಿತ ಮಾಡಿದ್ದಾರೆ. ನೊಂದ ನರಸಿಂಹಮೂರ್ತಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸಂಪೂರ್ಣ ಮಾಹಿತಿ ಪಡೆದು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net