

ಹುಣಸೂರು: 15ನೇ ಹಣಕಾಸು ಯೋಜನೆಯ 1.93 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ತಾಲೂಕು ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಕ್ರಿಯಾಯೋಜನೆಗೆ ಬೆಂಬಲ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ಗಿರೀಶ್ ಮಾತನಾಡಿ, ಈ ಬಾರಿ 15ನೇ ಹಣಕಾಸು ಯೋಜನೆಯಡಿ ನೀಡಿರುವ ಅನುದಾನಗಳಲ್ಲಿ ತಾ.ಪಂ.ಗಳಿಗೆ ಒಟ್ಟು ಅನುದಾನದ ಶೇ.10 ಅನುಪಾತದಡಿ ಆರ್ಥಿಕ ಸೌಲಭ್ಯ ಒದಗಿಸಲಾಗಿದೆ. ಅದರಂತೆ ಹುಣಸೂರು ತಾ.ಪಂ.ಗೆ 1,93,60,337 ರೂ.ಗಳ ಅನುದಾನ ದೊರಕಿದೆ. ಒಟ್ಟು ಅನುದಾನದ ಶೇ.25ರ ಪ್ರಮಾಣ ಎಸ್ಸಿ ಎಸ್ಟಿಗೆ ಹಾಗೂ ಶೇ.5ರಷ್ಟನ್ನು ಅಂಗವಿಕಲರಿಗೆ ಮೀಸಲಿಡಲಾಗುವುದು ಎಂದರು.
ನಿರ್ಬಂಧಿತ ಅನುದಾನ: ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ಒಟ್ಟು ಅನುದಾನದ ಶೇ.50 ಭಾಗ ನಿರ್ಬಂಧಿತ ಅನುದಾನ ಮತ್ತು ಶೇ.50 ರಷ್ಟನ್ನು ಅನಿರ್ಬಂಧಿತ ಅನುದಾನವೆಂದು ಪರಿಗಣಿಸಬೇಕು. ನಿರ್ಬಂಧಿತ ಅನುದಾನದಡಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ಸಾಂಸ್ಥಿಕ ಶೌಚಗೃಹಗಳ ದುರಸ್ತಿ ಮತ್ತು ರೆಟ್ರೋಫಿಲ್ಲಿಂಗ್, ನವೀನ ಮತ್ತು ನವೀಕರಿಸಬಹುದಾದ ಶಕ್ತಿ, ಜೈವಿಕ ಗೊಬ್ಬರ ಉತ್ಪಾದನೆ, ಕುಡಿಯುವ ನೀರಿನ ಮೂಲಗಳ ವೃದ್ಧಿಸುವಿಕೆ, ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ನೀರು ಪೂರೈಕೆ ಯೋಜನೆ ಇನ್ನಿತರ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಅನಿರ್ಬಂಧಿತ ಅನುದಾನವನ್ನು ಗ್ರಾ.ಪಂ.ಅನುದಾನದ ಸಹಯೋಗದಲ್ಲಿ ಕೈಗೊಂಡಲ್ಲಿ ಸಾರ್ಥಕವಾಗಲಿದೆ. ಈ ಕುರಿತು ಆಯಾ ಗ್ರಾ.ಪಂ.ಗಳಲ್ಲಿ ವಿವಿಧ ಯೋಜನೆಯಡಿ ಯಾವ್ಯಾವ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ರೂಪಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದರು.
ನಾಮನಿರ್ದೇಶನ ಬೇಡ: ಸಭೆಯಲ್ಲಿ ಸದಸ್ಯ ಪ್ರೇಮ್‌ಕುಮಾರ್, ರಾಜ್ಯ ಸರ್ಕಾರ ಗ್ರಾ.ಪಂ.ಗಳಿಗೆ ಚುನಾವಣೆ ನಡೆಸುವ ಬದಲು ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಹೊರಟಿರುವುದು ಪ್ರಜಾತಂತ್ರ ವ್ಯವಸ್ಥೆಗೆ ವಿರೋಧವಾಗಿದೆ. ಸರ್ಕಾರ ಈ ನಿರ್ಣಯವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದಾಗ ಸದಸ್ಯರೆಲ್ಲರೂ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಗಣಪತಿರಾವ್ ಇಂಡೋಲ್ಕರ್, ಪುಟ್ಟಮ್ಮ, ಕೆಂಗಯ್ಯ, ರವಿಪ್ರಸನ್ನ ಇತರರಿದ್ದರು.