

ತರಾತುರಿಯಲ್ಲಿ ಕ್ಯಾಬ್ ಜಪ್ತಿ ಮಾಡಿ 20 ಸಾವಿರ ರೂ.ಗೆ ಹರಾಜು ಹಾಕಿದ್ದ ಆರ್ಟಿಒ ಅಧಿಕಾರಿಗಳ ತಪ್ಪಿಗೆ 27 ವರ್ಷದ ಬಳಿಕ ಸರ್ಕಾರ ಬೆಲೆ ತೆರುವಂತಾಗಿದ್ದು, ಮಾಲೀಕನಿಗೆ ಬಡ್ಡಿ ಸೇರಿಸಿ 1.90 ಲಕ್ಷ ರೂ. ನೀಡುವಂತಾಗಿದೆ. ಹಾಸನ ಮೂಲದ ಕಲೀಂ ಪಾಷಾ ಪರಿಹಾರ ಪಡೆದ ಕ್ಯಾಬ್ ಮಾಲೀಕ.
ಪ್ರಕರಣವೇನು: ಹಾಸನದ ಅಮೀರ್ ಖರೀದಿಸಿದ್ದ ಮೋಟಾರ್ ಕ್ಯಾಬ್ಗೆ (ನೋಂದಣಿ ಸಂಖ್ಯೆ ಎಂವೈಎಚ್- 6566) ತೆರಿಗೆ ಪಾವತಿಸಿಲ್ಲ ಎಂದು ಆರ್ಟಿಒ ಅಧಿಕಾರಿಗಳು, ಜಪ್ತಿ ಮಾಡಿದ್ದರು. ಅಮೀರ್ ವಾಹನ ಬಿಡಿಸಿಕೊಳ್ಳಲು ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. 1990ರಲ್ಲಿ ಬಹಿರಂಗವಾಗಿ ಕ್ಯಾಬ್ ಹರಾಜು ಹಾಕಿದಾಗ 20 ಸಾವಿರ ರೂ.ಗೆ ಶಿವಶಂಕರ್ ಎಂಬುವರು ಖರೀದಿಸಿದ್ದರು. ಕೆಲವೇ ದಿನಗಳಲ್ಲಿ ಶಿವಶಂಕರ್, ಕ್ಯಾಬ್ನ್ನು ಕಲೀಂಗೆ ಮಾರಾಟ ಮಾಡಿದ್ದರು.
ಈ ನಡುವೆ ಮೂಲ ವಾರಸುದಾರ ಅಮೀರ್, ಹರಾಜು ಪ್ರಕ್ರಿಯೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಹರಾಜು ಪ್ರಕ್ರಿಯೆ ಅನೂರ್ಜಿತಗೊಳಿಸಿ ವಾಹನ ವಶಕ್ಕೆ ಪಡೆಯಲು ಆದೇಶಿಸಿತ್ತು.
ಅಧಿಕಾರಿಗಳು ವಾಹನ ಜಪ್ತಿ ಮಾಡಿ ಕೋರ್ಟ್ಗೆ ವರದಿ ಸಲ್ಲಿಸಿದ್ದರು. ಬಳಿಕ ವಾಹನ ಕಳೆದುಕೊಂಡ ಕಲೀಂ ಪಾಷಾ, ಶಿವಶಂಕರ್ನಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು 2007ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ 2018ರ ಮಾರ್ಚ್ 8ರಂದು ಕಲೀಂ ಪಾಷಾ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರ್ಟಿಒ ಅಧಿಕಾರಿಗಳು, ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ತಿರಸ್ಕರಿಸಿ ಕಲೀಂಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಕಲೀಂ ಪಾಷಾ 38,950 ರೂ.ಗೆ ಕ್ಯಾಬ್ ಖರೀದಿ ಮಾಡಿದ್ದರು. 1993ರಲ್ಲಿ ಕ್ಯಾಬ್ ಜಪ್ತಿ ಮಾಡಲಾಗಿತ್ತು. 1993ರಿಂದ 2019ರ ಮೇ 31ವರೆಗೆ 38,950 ರೂ.ಗೆ ಶೇ.15 ಬಡ್ಡಿ ಸೇರಿಸಿ 1,90,855 ರೂ. ಪರಿಹಾರ ಬಿಡುಗಡೆ ಮಾಡಿದೆ. ಆದರೆ ಪರಿಹಾರ ಮೊತ್ತವನ್ನು ತಪ್ಪಿತಸ್ಥ ಆರ್ಟಿಒ ಅಧಿಕಾರಿಯಿಂದ ವಸೂಲಿ ಮಾಡುತ್ತಾರೋ ಅಥವಾ ಸರ್ಕಾರವೇ ತೆರಿಗೆ ಹಣಯಿಂದ ಪಾವತಿ ಮಾಡುತ್ತದೋ ಕಾದು ನೋಡಬೇಕಾಗಿದೆ.
| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು