ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಎಸ್‌ಐಟಿ ಮತ್ತಷ್ಟು ಹಣ ಜಪ್ತಿ ಮಾಡಿಕೊಂಡಿದೆ.
ಬಂಧಿತ ಆರೋಪಿಯೊಬ್ಬರ ಸಂಬಂಧಿ ಮನೆಯಿಂದ ೧.೪೯ ಕೋಟಿ ರೂ.ಜಪ್ತಿ ಮಾಡಿದ್ದಾರೆ.
ಆರೋಪಿ ನಾಗೇಶ್ವರ ರಾವ್ ಎಂಬಾತನ ಸಂಬಂಧಿಯ ಮನೆಯಿಂದ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಜಕ್ಕೂರಿನ ಮನೆಯಲ್ಲಿ ಇಡಲಾಗಿತ್ತು. ಈ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡವು ಹಣ ಜಪ್ತಿ ಮಾಡಿಕೊಂಡಿದೆ.
ಈ ಹಿಂದೆ ಆರೋಪಿ ಸತ್ಯನಾರಾಯಣ್ ವರ್ಮಾ ಎಂಬುವವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು. ಅವರಿಂದ ೮.೨೧ ಕೋಟಿ ನಗದು ಜಪ್ತಿ ಮಾಡಿಕೊಳ್ಳಲಾಗಿತ್ತು. ಜೂನ್ ೩೦ರಂದು ನಿಗಮದ ಮಾಜಿ ವ್ಯವಸ್ಥಾಪಕನ ಆಪ್ತನ ಬಳಿಯಿಂದ ೩೦ ಲಕ್ಷ ಜಪ್ತಿ ಮಾಡಿಕೊಳ್ಳಲಾಗಿತ್ತು. ಇದುವರೆಗೂ ಈ ಪ್ರಕರಣದಲ್ಲಿ ೧೩.೬೨ ಕೋಟಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ೧೮ ಖಾತೆಗಳಿಗೆ ೯೪.೭೩ ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ.