1.40 ಸಾವಿರ ಕೋಟಿ ರೂ. ವ್ಯವಹಾರ: ಕರ್ಣಾಟಕ ಬ್ಯಾಂಕ್ ಗುರಿ

Karnataka Bank
Published on

ಮಂಗಳೂರು: ಕರ್ಣಾಟಕ ಬ್ಯಾಂಕ್ 2020 ಮಾರ್ಚ್ ವರ್ಷಾಂತ್ಯಕ್ಕೆ 1.29 ಸಾವಿರ ಕೋಟಿ ರೂ. ದಾಖಲೆ ವ್ಯವಹಾರ ನಡೆಸಿದ್ದು, 2020-21ರಲ್ಲಿ 1.40 ಸಾವಿರ ಕೋಟಿ ರೂ. ವ್ಯವಹಾರದ ಗುರಿ ಹೊಂದಿದೆ ಎಂದು ಬ್ಯಾಂಕ್ ಎಂ.ಡಿ. ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ನೂತನ ಆರ್ಥಿಕ ವರ್ಷದ ಮೊದಲ ದಿನ (ಬುಧವಾರ) ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್​ನ ಸಿಬ್ಬಂದಿ ವರ್ಗ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಕರೊನಾ ವೈರಸ್​ನಿಂದ ತತ್ತರಿಸಿರುವ ಆರ್ಥಿಕತೆಯನ್ನು ನಿಯಂತ್ರಣದಲ್ಲಿಡಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಪಡಿಸಿದ ಮೂರು ತಿಂಗಳ ಸಾಲ ಮರುಪಾವತಿ ಮುಂದೂಡಿಕೆ ಸಹಿತ ಎಲ್ಲ ಉಪಕ್ರಮಗಳನ್ನು ತುರ್ತು ನೆಲೆಯಲ್ಲಿ ಜಾರಿಗೊಳಿಸಿ, ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಹಕರ ನೆರವಿಗೆ ಧಾವಿಸಬೇಕು ಎಂದರು.

ಕೋವಿಡ್-19 ಮುಂಜಾಗ್ರತಾ ಕ್ರಮಗಳೊಂದಿಗೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿರುವ ಎಲ್ಲ ಸಿಬ್ಬಂದಿಗಳನ್ನು ಅಭಿನಂದಿಸಿದ ಅವರು, ಮುಂಬರುವ ಸಂಭಾವ್ಯ ಆರ್ಥಿಕ ಹಿಂಜರಿತಕ್ಕೆ ಈಗಿಂದಲೇ ಸನ್ನದ್ಧರಾಗಬೇಕು. ಗ್ರಾಹಕರು ಸಹ ಬ್ಯಾಂಕ್​ನ ಡಿಜಿಟಲ್ ಚಾನಲ್​ಗಳನ್ನು ಹೆಚ್ಚು ಹೆಚ್ಚು ಬಳಸಿ, ನಗದು ವ್ಯವಹಾರ ಕಡಿಮೆ ಮಾಡಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬ್ಯಾಂಕ್ ಶಾಖೆಗಳ ಸೌಲಭ್ಯ ಬಳಸಿಕೊಂಡು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಿ. ಕರೊನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದರು.

ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಉತ್ತಮ ಗ್ರಾಹಕ ಸೇವೆ ಮುಂದುವರಿಸಿ, ಭದ್ರ ಆರ್ಥಿಕ ತಳಪಾಯದೊಂದಿಗೆ ಬ್ಯಾಂಕ್​ನ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. | ಮಹಾಬಲೇಶ್ವರ ಎಂ.ಎಸ್ ಎಂ.ಡಿ, ಸಿಇಒ ಕರ್ಣಾಟಕ ಬ್ಯಾಂಕ್‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net