

ಬೆಂಗಳೂರು: ಚುನಾವಣಾ ಅಧಿಕಾರಿಗಳು ಶನಿವಾರ ನಗರದಲ್ಲಿ ಭರ್ಜರಿ ಭೇಟೆಯಾಡಿದ್ದು, ಸಿನಿಮೀಯ ರೀತಿ ಎರಡು ಕಾರು ಮತ್ತು ಬೈಕ್‌ನಲ್ಲಿ ಸಾಗಿಸುತ್ತಿದ್ದ 1.4 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದಾರೆ.
ಹಣದ ಸಮೇತ ಎರಡು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಚುನಾವಣಾ ಅಧಿಕಾರಿಗಳು ಹಾಗೂ ಜಯನಗರ ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣಾ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಫಾರ್ಚುನರ್ ಕಾರಿನಲ್ಲಿದ್ದ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರದ ೪ನೇ ಹಂತದ ಬಳಿ ಹಣ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಹಣ ಸಾಗಾಟ ಬಗ್ಗೆ ಮಾಹಿತಿ ಆಧರಿಸಿ ಶುಕ್ರವಾರ ೧೧ ಗಂಟೆಯ ವೇಳೆ ಸ್ಥಳಕ್ಕೆ ಬಂದ ಬೆಂಗಳೂರು ನಗರ ಚುನಾವಣಾಧಿಕಾರಿ ಮುನೀಶ್ ಮುದ್ಗಿಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಾರಿನ ಬ್ಯಾಗ್‌ನಲ್ಲಿದ್ದ ಹಣವನ್ನು ಪಡಿಸಿಕೊಂಡು ಜಯನಗರ ಪೊಲೀಸರಿಗೆ ಹಣ ಮತ್ತು ವಾಹನಗಳನ್ನು ಒಪ್ಪಿಸಿದ್ದಾರೆ.
ಹಣ ಎಣಿಸಲು ಕೌಟಿಂಗ್ ಮೆಷಿನ್ ತಂದ ಐಟಿ:
ಕಾರ್ಯಾಚರಣೆ ವೇಳೆ ಬೃಹತ್ ಮೊತ್ತದ ಹಣ ಸಿಕ್ಕಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಆದಾಯ ತೆರಿಗೆ(ಐಟಿ) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜಯನಗರ ಪೊಲೀಸ್ ಠಾಣೆಗೆ ಬಂದ ಐಟಿ ಅಧಿಕಾರಿಗಳು ಹಣವನ್ನು ಯಂತ್ರದ ಸಹಾಯದಿಂದ ಎಣಿಸಿ ಬಳಿಕ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಜಪ್ತಿಯಾದ ವಿಷಯ ತಿಳಿದು ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಜಪ್ತಿಯಾದ ಹಣ ಕಾಂಗ್ರೆಸ್‌ನವರಿಗೆ ಸೇರಿದ್ದು ಎಂದು ಬಿಜೆಪಿಯವರು ಆರೋಪಿಸಿದ್ದಾರೆ.
ಇನ್ನು ಜಪ್ತಿ ಮಾಡಿಕೊಂಡಿರುವ ಮರ್ಸಿಡೀಸ್ ಬೆನ್ಜ ಕಾರು ಶುಕ್ರವಾರವಷ್ಟೇ ನೋಂದಣಿಯಾಗಿದ್ದು ಸೋಮಶೇಖರ್ ಎಂಬುವರ ಹೆಸರಿನಲ್ಲಿದ್ದರೆ, ದ್ವಿಚಕ್ರ ವಾಹನವು ಧನಂಜಯ್ ಎಂಬುವರ ಹೆಸರಿನಲ್ಲಿದೆ. ಮತ್ತೊಂದು ವೋಕ್ಸ್ ವ್ಯಾಗನ್ ಪೋಲೋ ಕಾರಿನ ಮಾಲೀಕರು ತಿಳಿದುಬಂದಿಲ್ಲ. ಜಪ್ತಿ ಮಾಡಿಕೊಂಡಿರುವ ಹಣವನ್ನು ಐಟಿ ಅಧಿಕಾರಿಗಳ ಸುರ್ಪದಿಗೆ ಒಪ್ಪಿಸಲಾಗಿದೆ. ಜಪ್ತಿ ಮಾಡಿಕೊಂಡಿರುವ ವಾಹನಗಳನ್ನು ೨೦೦ ಸಿಆರ್‌ಪಿಸಿ ಅಡಿ ಕೋರ್ಟ್‌ಗೆ ಒಪ್ಪಿಸಲಾಗುವುದು. ಚುನಾವಣಾ ಅಧಿಕಾರಿಗಳು ವರದಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ:
ಈ ಸಂಬಂಧ ಮುನೀಶ್ ಮೌದ್ಗಿಲ್ ಮಾತನಾಡಿ, ನಮಗೆ ಶುಕ್ರವಾರ ಬೆಳಗ್ಗೆ ನಮಗೆ ಒಂದು ಕರೆ ಬಂದಿತ್ತು. ವಾಹನದಲ್ಲಿ ಹಣ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ನಮ್ಮ ಅಧಿಕಾರಿ ವಿನೋದ್ ಪ್ರಿಯಾ ಅವರಿಗೆ ತಿಳಿಸಿದೆ ಅವರು ಒಬ್ಬರೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ತಕ್ಷಣ ಅಧಿಕಾರಿಗಳ ಜತೆ ನಾನು ಸ್ಥಳಕ್ಕೆ ಬಂದಿದ್ದೆ ಕರೆ ಬಂದ ಮೂರು ನಿಮಿಷಕ್ಕೆ ಸ್ಥಳಕ್ಕೆ ಹೋದೆವು. ದ್ವಿಚಕ್ರ ವಾಹನದಿಂದ ಫಾರ್ಚೂನರ್ ಕಾರಿಗೆ ಬ್ಯಾಗ್‌ನಲ್ಲಿದ್ದ ಹಣ ಶ್‌ಟಿ ಮಾಡುತ್ತಿದ್ದರು. ಫಾರ್ಚೂನರ್‌ನಲ್ಲಿ ಒಟ್ಟು ಐದು ಜನರಿದ್ದರು. ಅವರನ್ನು ಚುನಾವಣಾ ಮಹಿಳಾ ಅಧಿಕಾರಿ ಪ್ರಶ್ನಿಸುತ್ತಿದಂತೆ ಪರಾರಿಯಾಗಿದ್ದಾರೆ. ಮಹಿಳಾ ಅಧಿಕಾರಿ ಒಬ್ಬರೇ ಇದ್ದಿದ್ದರಿಂದ ತಕ್ಷಣ ದ್ವಿಚಕ್ರ ವಾಹನದಲ್ಲಿದ್ದ ಒಂದು ಬ್ಯಾಗ್ ಜಫ್ತಿ ಮಾಡಿದ್ದರು. ನಂತರ ನಾವು ಸ್ಥಳಕ್ಕೆ ಬಂದು ಕಾರುಗಳಲ್ಲಿ ಇದ್ದ ಹಣವನ್ನು ಜಪ್ತೊ ಮಾಡಿದ್ದೇವು. ಹಣದ ಬಗ್ಗೆ ಐಟಿ ಅಧಿಕಾರಿಗಳಿ ಮಾಹಿತಿ ನೀಡಿದ್ದು ೧.೪ ಕೋಟಿ ರೂ.ಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಪರಾರಿಯಾಗಿರುವ ಫಾರ್ಚೂನರ್ ಕಾರಿನ ನಂಬರ್ ಅನ್ನು ನೋಟ್ ಮಾಡಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮವನ್ನು ಪೊಲೀಸರು ಜರುಗಿಸಲಿದ್ದಾರೆ ಎಂದರು.