

ಬೆಂಗಳೂರು: ಜಯನಗರ 4ನೇ ಹಂತ 7ನೇ ಮುಖ್ಯ ರಸ್ತೆಯಲ್ಲಿ ಬೆಂಜ್ ಕಾರಿನಲ್ಲಿ 1.34 ಕೋಟಿ ರೂ. ಪತ್ತೆ ಪ್ರಕರಣ ಸಂಬಂಧ ವಾಹನ ಮಾಲೀಕರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಜಯನಗರ ವಿಧಾನಸೌಧ ಕ್ಷೇತ್ರದ ಪ್ಲೈಯಿಂಗ್ ಸ್ಕ್ವಾಡ್ ತಂಡದ ಎನ್. ಮಂಜುನಾಥ್, ಜಯನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ವಾಹನ ಮಾಲೀಕರಾದ ಸೋಮಶೇಖರ್ ಮತ್ತು ಧನಂಜಯ್ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏ.13ರಂದು ಜಯನಗರ 4ನೇ ಹಂತದ ಬಳಿ ಕೋಟ್ಯಂತರ ರೂ. ಸಾಗಾಟ ಮಾಹಿತಿ ಹಿನ್ನೆಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಚುನಾವಣಾ ಪ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಗಳು 1 ದ್ವಿಚಕ್ರ ವಾಹನ, 2 ಕಾರು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಪ್ರತ್ಯೇಕ 3 ಬ್ಯಾಗ್‌ನಲ್ಲಿ ಕಂತೆ-ಕಂತೆ ಹಣದ ಬಂಡಲ್ಗಳು ಪತ್ತೆಯಾಗಿತ್ತು. ಅಲ್ಲದೇ ಕಾರಿನಲ್ಲಿ 1 ಮೊಬೈಲ್, ದಾಖಲಾತಿಗಳು ದೊರಕಿತ್ತು. ಚುನಾವಣಾ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಹ ಸ್ಥಳಕ್ಕೆ ಬಂದು ಪರಿಶೀಲಿಸಿ 1.34 ಕೋಟಿ ರೂ. ಮತ್ತು ದಾಖಲಾತಿ ಪತ್ರಗಳು ವಶಕ್ಕೆ ಪಡೆದುಕೊಂಡಿದ್ದರು.
ತನಿಖೆ ಕೈಗೊಂಡ ಪೊಲೀಸರು, ಧನಂಜಯ್ ಮತ್ತು ಸೋಮಶೇಖರ್‌ಗೆ ನೊಟೀಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಸೂಕ್ತ ದಾಖಲೆ ಇಲ್ಲದೆ ಹಣ ಸಾಗಾಟ ನಡೆಸುತ್ತಿರುವುದು ಕಂಡುಬಂದಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ವಾಹನಗಳಲ್ಲಿ ಹಣವನ್ನು ಸಾಗಾಟ ಮಾಡುತ್ತಿದ್ದು, ಇದು ಮತದಾರರಿಗೆ ಆಮಿಷವೊಡ್ಡಲು ತೆಗೆದುಕೊಂಡು ಹೋಗುತ್ತಿರುವ ಸಾಧ್ಯತೆಗಳಿವೆ. ಆದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.