

ಇಡೀ ಜಗತ್ತಿಗೇ ವಕ್ಕರಿಸಿರುವ ಕೋವಿಡ್-19 ಮಹಾಮಾರಿ ವಿರುದ್ಧ ಭಾರತದಲ್ಲಿ ಸುಮಾರು 1.2 ಕೋಟಿ ಜನರು ಸೇನಾನಿಗಳಂತೆ (ವಾರಿಯರ್ಸ್) ಹೋರಾಡುತ್ತಿದ್ದಾರೆ. 130 ಕೋಟಿಗೂ ಹೆಚ್ಚು ಜನರ ಯೋಗ ಕ್ಷೇಮ ಕಾಪಾಡಲು 18 ವಿವಿಧ ವಿಭಾಗಗಳಿಂದ ಈ ಸೇನಾನಿಗಳು ತಮ್ಮ ಆರೋಗ್ಯ, ಕೌಟುಂಬಿಕ ಸೌಖ್ಯವನ್ನೆಲ್ಲ ಮರೆತು ಹಗಲಿರುಳೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಕಡಿಮೆ ತರಬೇತಿ ಹೊಂದಿದ ಅಥವಾ ಕಡಿಮೆ ಅರ್ಹತೆಯುಳ್ಳ ಜನರು ಈ ಕಾಯಕದಲ್ಲಿ ನಿರತರಾಗಿರುವುದು ಕೂಡ ವಾಸ್ತವ ಸಂಗತಿ.
ಯಾರ್ಯಾರು ವಾರಿಯರ್ಸ್?
ಐದು ರಾಜ್ಯಗಳಲ್ಲಿ ಹೆಚ್ಚಿನವರು
ಕೋವಿಡ್ ವಾರಿಯರ್ಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವರು ಕೇವಲ ಐದು ರಾಜ್ಯಗಳಿಗೆ ಸೇರಿದವರು. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗುಜರಾತ್ ಈ ಐದು ರಾಜ್ಯಗಳು. ಶೇ. 50 ವೈದ್ಯರು, ಶೇ. 42 ನರ್ಸ್ಗಳು, ಫಾರ್ವಸಿಸ್ಟ್ಗಳು ಈ ಐದು ರಾಜ್ಯಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರ ಪಾತ್ರ ನಿರ್ಣಾಯಕ
82 ಲಕ್ಷ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಾಮಾಜಿಕ ಆರೋಗ್ಯ ವೃತ್ತಿನಿರತರು, ಎನ್ಎಸ್ಎಸ್,
ಎನ್ಸಿಸಿ, ನೆಹರೂ ಯುವ ಕೇಂದ್ರ ಸಂಘಟನೆ ಸದಸ್ಯರು, ಮಾಜಿ ಸೈನಿಕರು ಹಾಗೂ ಆಯುಷ್ ವೃತ್ತಿನಿರತರ ಸೇವೆ ಬಹುತೇಕವಾಗಿ ವೈರಸ್ ನಿಯಂತ್ರಣ ಕಾರ್ಯದಲ್ಲಿ ಎರಡನೇ ಅಥವಾ ಮೂರನೇ ಹಂತದ ಚಟುವಟಿಕೆಗಳಿಗೆ ಸೀಮಿತವಾದುದಾಗಿದೆ. ಮನೆ-ಮನೆ ಸಮೀಕ್ಷೆ ನಡೆಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು. ‘ಆಶಾ ಕಾರ್ಯಕರ್ತೆಯರ ಪಾತ್ರ ತುಂಬಾ ನಿರ್ಣಾಯಕವಾದುದು. ಉದಾಹರಣೆಗೆ ಕರ್ನಾಟಕದಲ್ಲಿ ಅವರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ತುಂಬಾ ಮಹತ್ವದ್ದಾದ ಸಾಮುದಾಯಿಕ ಅಂಕಿಸಂಖ್ಯೆಗಳನ್ನು ಸರ್ಕಾರಕ್ಕೆ ಒದಗಿಸುತ್ತಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
42.7 ಲಕ್ಷ ಮಂದಿಗೆ ರೋಗಿಗಳ ಜತೆ ನೇರ ಸಂಪರ್ಕ
ಈ 1.2 ಕೋಟಿ ವಾರಿಯರ್ಸ್ ಪೈಕಿ ಶೇ. 34 (42.7 ಲಕ್ಷ ಜನರು) ವೈದ್ಯರು, ನರ್ಸ್ಗಳು, ಫಾರ್ವಸಿಸ್ಟ್ ಗಳು, ಪ್ರಯೋಗಾಲಯ ಸ್ವಯಂಸೇವಕರು ಮತ್ತು ಇತರ ತರಬೇತಾದ ಆರೋಗ್ಯ ರಕ್ಷಣೆ ವೃತ್ತಿನಿರತರು. ಇವರು ರೋಗಿಗಳನ್ನು ನಿಭಾಯಿಸುವಲ್ಲಿ ನೇರವಾಗಿ ತೊಡಗಿಸಿಕೊಂಡವರು ಎಂದು ಅಧ್ಯಯನವೊಂದು ತಿಳಿಸಿದೆ. ಆರೋಗ್ಯ ರಕ್ಷಣೆ ಕ್ಷೇತ್ರದ ಇತರ ವೃತ್ತಿನಿರತರೆಂದರೆ ಸಹಾಯಕರು, ತುರ್ತು ವೈದ್ಯಕೀಯ ತಂತ್ರಜ್ಞರು, ಎಕ್ಸ್ರೇ ಹಾಗೂ ರೇಡಿಯಾಲಜಿ ತಂತ್ರಜ್ಞರು ಮತ್ತಿತರರು.
ಅಸಮಾನತೆ
ಕರೊನಾ ರೋಗದ ಎದುರು ಹೋರಾಟ ನಡೆಸುವಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಗಳ ಅಂಕಿಸಂಖ್ಯೆಯ ವಿಶ್ಲೇಷಣೆ, ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿರುವ ಪ್ರಾದೇಶಿಕ ಅಸಮಾನತೆ ಯನ್ನು ತೋರಿಸುತ್ತದೆ. ಅನೇಕ ವಿಷಯಗಳಲ್ಲಿ ನಗರ-ಗ್ರಾಮೀಣ ಮತ್ತು ದಕ್ಷಿಣ ಭಾರತ-ಉತ್ತರ ಭಾರತವೆಂಬ ಅಸಮಾನತೆ ಈಗಾಗಲೇ ಇದೆ ಎನ್ನುತ್ತಾರೆ ತಜ್ಞರು. ಕೋವಿಡ್-19 ಎದುರಿಸಲು ತೀರಾ ಒಳನಾಡು ಪ್ರದೇಶಗಳು ಹಾಗೂ ಹೆಚ್ಚಿನ ಸೇವಾ ವ್ಯವಸ್ಥೆಯಿಲ್ಲದ ಪ್ರದೇಶಗಳನ್ನು ಗುರುತಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕಿದೆ.
1.2 ಕೋಟಿ. ಒಟ್ಟು ಕೊವಿಡ್ ವಾರಿಯರ್ಗಳು
42.7 ಲಕ್ಷ ವೈದ್ಯರು, ನರ್ಸ್ಗಳು, ಮತ್ತು ಇತರರು.
2.1 ಲಕ್ಷ ದಂತ ವೈದ್ಯರು.
30 ಲಕ್ಷ ಎನ್ಎಸ್ಎಸ್, ಎನ್ಸಿಸಿ, ನೆಹರೂ ಯುವ ಕೇಂದ್ರ ಸದಸ್ಯರು ಹಾಗೂ ಮಾಜಿ ಸೈನಿಕರು.
8.3 ಲಕ್ಷ ಆಯುಷ್ ವೈದ್ಯರು.
35.5 ಲಕ್ಷ ಅಂಗನವಾಡಿ, ಆಶಾ ಕಾರ್ಯಕರ್ತೆಯರು.