4 ವರ್ಷ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದು ಮದ್ವೆಯಾದ ಕೆಲವೇ ತಿಂಗಳಲ್ಲಿ ಬರ್ಬರ ಹತ್ಯೆಯಾದ ನವವಿವಾಹಿತ!

Groom kill
Published on

ಹೈದರಾಬಾದ್​: ನವವಿವಾಹಿತನೊಬ್ಬ ಪತ್ನಿಯ ಮನೆಯವರಿಂದಲೇ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತೆಲಂಗಾಣದ ಹೈದರಾಬಾದಿನಲ್ಲಿ ಶುಕ್ರವಾರ ನಡೆದಿದೆ.

ಹೇಮಂತ್​ ಕುಮಾರ್​ (28) ಮೃತ ದುರ್ದೈವಿ. ಇಂಟಿರಿಯರ್​ ಡಿಸೈನರ್​ ಆಗಿದ್ದ ಹೇಮಂತ್​ ಶವ ಶುಕ್ರವಾರ ಬೆಳಗ್ಗೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದೀಗ ಶವವನ್ನು ಒಸ್ಮಾನಿಯಾ ಶವಗಾರಕ್ಕೆ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ. ಇದೇ ಪ್ರಕರಣದಲ್ಲಿ 13 ಮಂದಿಯನ್ನು ಸೈಬರಬಾದ್​ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಅಂದಹಾಗೆ ಹೇಮಂತ್​, 25 ವರ್ಷದ ಇಂಜಿನಿಯರ್​ ಪದವೀಧರೆ ಆವಂತಿ ರೆಡ್ಡಿ ಎಂಬಾಕೆಯನ್ನು ಕಳೆದ ಜೂನ್​ ತಿಂಗಳಲ್ಲಿ ವಿವಾಹವಾಗಿದ್ದರು. ಇವರಿಬ್ಬರು ನಾಲ್ಕು ವರ್ಷದಿಂದ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಇದು ಆವಂತಿ ಮನೆಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ಪೊಲೀಸ್​ ಠಾಣೆಗೆ ಹಾಜರಾಗಿ ಪತ್ನಿ ಕುಟುಂಬದಿಂದ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದರು. ಬಳಿಕ ಹೇಮಂತ್​ ಮತ್ತು ಆವಂತಿ ದಂಪತಿಯ ಎರಡು ಕುಟುಂಬದವರನ್ನು ಠಾಣೆಗೆ ಕರೆಯಿಸಿ ಸಮಾಲೋಚನೆ ನಡೆಸಿ, ಬುದ್ಧಿ ಮಾತು ಹೇಳಿ ಕಳುಹಿಸಿದ್ದರು.

ಆದರೆ, ಆವಂತಿ ಕುಟುಂಬದ 15 ಮಂದಿ ಗುರುವಾರ ದಂಪತಿ ಮನೆಗೆ ಆಗಮಿಸಿ, ಅವರನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಆವಂತಿ ಕಾರಿನಿಂದ ಜಿಗಿದಿದ್ದಾಳೆ. ಆದರೆ, ಹೇಮಂತ್​ ಕೈಯಲ್ಲಿ ಸಾಧ್ಯವಾಗಿಲ್ಲ. ಉದ್ಯಮಿಯಾಗಿರುವ ಆವಂತಿಯ ಅಂಕಲ್​ ಯುಗಂಧರ ರೆಡ್ಡಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಇತ್ತ ಆವಂತಿ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿದ್ದಾಳೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆವಂತಿ ಕುಟುಂಬ ಕೆಲವು ಮಂದಿಯನ್ನು ವಶಕ್ಕೆ ಪಡೆದರು.

ಇದಾದ ಬಳಿಕ ವಿಶೇಷ ತಂಡವೊಂದು ಸಂಗಾರೆಡ್ಡಿ ಜಿಲ್ಲೆಯ ಕಿಸ್ತಾಯಿಗುಡೆಮ್​ ಗ್ರಾಮದ ನಿರ್ಜನ ಪ್ರದೇಶದಲ್ಲಿ ಹೇಮಂತ್​ ಶವವನ್ನು ಪತ್ತೆಹಚ್ಚಿತು. ಇನ್ನು ಹೇಮಂತ್​ ವೈಶ್ಯ ಸಮುದಾಯಕ್ಕೆ ಸೇರಿದವನಾಗಿದ್ದ. ಆವಂತಿ ರೆಡ್ಡಿ ಸಮುದಾಯದವಳು. ಹೀಗಾಗಿ ಮದುವೆಗೆ ಕುಟುಂಬದ ವಿರೋಧವಿತ್ತು. ಆದಗ್ಯೂ ಇಬ್ಬರು ಮದುವೆಯಾಗಿದ್ದನ್ನು ಸಹಿಸದೇ ಹೇಮಂತ್​ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಆವಂತಿ ಕುಟುಂಬದವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net