

ಬೆಂಗಳೂರು: ನೇಮಕಾತಿ ನಡೆದು ತಿಂಗಳುಗಳೇ ಕಳೆದಿದ್ದರೂ ಇನ್ನು ನೇಮಕಾತಿ ಆದೇಶ ಕೈಸೇರದ ಹಿನ್ನೆಲೆಯಲ್ಲಿ ಆಕ್ರೋಶಭರಿತ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಕುಳಿತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ನಗರದ ಫ್ರೀಡಂ ಪಾರ್ಕ್ಗೆ ಆಗಮಿಸಿರುವ ಶಿಕ್ಷಕರು ವಿಧಾನಸಭೆ ಕಲಾಪದ ಸಮಯದಲ್ಲೇ ಪ್ರತಿಭಟನೆಗೆ ಕುಳಿತುಕೊಳ್ಳವ ಮೂಲಕ ಸರ್ಕಾರದ ಗಮನ ಸೆಳೆಯಲು ಪಯತ್ನಿಸಿದ್ದಾರೆ. ನೇಮಕಾತಿ ಆದೇಶ ಕೈಸೇರದ ಉಂಟಾಗಿರುವ ಅನೇಕ ಸಮಸ್ಯೆಗಳ ಬಗ್ಗೆಯೂ ಶಿಕ್ಷಕರು ತಮ್ಮ ಧ್ವನಿ ಎತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ 6 ರಿಂದ 8ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆದಿತ್ತು. ಬಿಜೆಪಿ ಸರ್ಕಾರದಲ್ಲಿ ಬಿ.ಸಿ. ನಾಗೇಶ್ ಅವರು ಶಿಕ್ಷಣ ಮಂತ್ರಿಯಾಗಿದ್ದ ಸಮಯದಲ್ಲಿ ಈ ನೇಮಕಾತಿ ಆರಂಭವಾಯಿತು. ಈ ಪರೀಕ್ಷೆಯನ್ನು 70 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಬರೆದಿದ್ದರು. ಇದರಲ್ಲಿ 13,352 ಮಂದಿ ಆಯ್ಕೆಯಾಗಿದ್ದಾರೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಒಂದುಯ ವರ್ಷ ಕಳೆದರೂ ಇನ್ನು ಆದೇಶ ಪ್ರತಿ ಆಯ್ಕೆಯಾದ ಶಿಕ್ಷಕರ ಕೈಸೇರಿಲ್ಲ.
ಇದೀಗ ಸರ್ಕಾರ ಬದಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳೂ ಕಳೆದರೂ ಈ ಬಗ್ಗೆ ಸರ್ಕಾರ ಯಾವುದೇ ನಿಲುವು ತೆಗೆದುಕೊಳ್ಳದಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೆಲವು ಅಭ್ಯರ್ಥಿಗಳು ನೇಮಕಾತಿಯ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರಿಂದ ಉಳಿದವರ ನೇಮಕಾತಿ ವಿಳಂಬವಾಗುತ್ತಿದೆ. ಯಾವುದೇ ಕಾನೂನು ತೊಡಕು ಇಲ್ಲದಿದ್ದರೂ ನೇಮಕಗೊಂಡಿರುವ 13 ಸಾವಿರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ನೇಮಕ ಪ್ರಕ್ರಿಯೆ ಚುರುಕುಗೊಳಿಸಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.
ನೇಮಕಾತಿಯ ವಿಳಂಬ ಆಗುತ್ತಿರುವುದರಿಂದ ಅಭ್ಯರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳು ತಮ್ಮ ಜೀವನೋಪಯಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೇಮಕಾತಿ ಪಟ್ಟಿಯಲ್ಲಿ ಕೆಲವರ ಹೆಸರು ಇರುವುದರಿಂದ ಅವರನ್ನು ಶಿಕ್ಷಣ ಸಂಸ್ಥೆಯಿಂದ ಹೊರಗೆ ಹಾಕಲಾಗುತ್ತಿದೆ. ಆದರೆ, ಇತ್ತ ನೇಮಕಾತಿಯು ಸಹ ಖಚಿತ ಆಗದಿರುವುದರಿಂದ ಅಡಕತ್ತರಿಯಲ್ಲಿ ಸಿಲುಕುವ ಆತಂಕ ಎದುರಾಗಿದೆ. ದಾಖಲಾತಿಗಳ ಪರಿಶೀಲನೆಗೆಂದು ಮೂಲ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ನೀಡುವುದರಿಂದ ಬೇರೆ ಕೆಲಸವನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗುವ ಸಾಧ್ಯತೆ ಇದ್ದು, ನೀತಿ ಸಂಹಿತೆ ಜಾರಿಯಾದರೆ ನೇಮಕಾತಿ ಮತ್ತಷ್ಟು ವಿಳಂಬವಾಗಲಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ನೇಮಕಾತಿ ಆದವರು ತಮಗೆ ಯಾವಾಗ ನೇಮಕಾತಿ ಆದೇಶ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರೆ, ತಮ್ಮ ಮಕ್ಕಳನ್ನು ಯಾವ ಶಾಲೆಗಳಿಗೆ ದಾಖಲಿಸಬೇಕು? ಎಲ್ಲಿ ವಾಸವಾಗಬೇಕು? ಗೊಂದಲವೂ ಮೂಡಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದ್ದು, ನೇಮಕಾತಿ ವಿಳಂಬದಿಂದ ಅದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೂ ಕೂಡ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಬೇಕು ಎಂಬ ಕೆಲವು ಜಿಲ್ಲೆಗಳ DDPIಗಳ ಸೂಚನೆ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಶಿಕ್ಷಕರ ವರ್ಗಾವಣೆ ಮತ್ತು ಮುಂಬಡ್ತಿಯ ಬಳಿಕ ನೇಮಕಾತಿ ಪ್ರಕ್ರಿಯೆ ಮುಗಿಸುತ್ತೇವೆ ಎಂಬ ಸರ್ಕಾರದ ಹೇಳಿಕೆಯಿಂದ ಶಿಕ್ಷಕರಿಗೆ ಆತಂಕ ಎದುರಾಗಿದೆ. ಏಕೆಂದರೆ, ಈ ಎರಡು ಪ್ರಕ್ರಿಯೆ ಮುಗಿಯುವಷ್ಟರಲ್ಲಿ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ಏನಾದರೂ ಎದರಾದರೆ, ನೀತಿ ಸಂಹಿತೆ ಜಾರಿಯಿಂದ ನೇಮಕಾತಿ ಆದೇಶ ಕೈಸೇರುವುದು ಮತ್ತಷ್ಟು ವಿಳಂಬ ಆಗಬಹುದು ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವಂತೆ ಶಿಕ್ಷಕರು ಧರಣಿ ಕುಳಿತಿದ್ದಾರೆ.