

ಚೆನ್ನೈ: ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗುತ್ತಿರುವ ಹಾಲಿ ರನ್ನರ್ಅಪ್ ನ್ಯೂಜಿಜಲೆಂಡ್ ತಂಡ ಏಕದಿನ ವಿಶ್ವಕಪ್ನಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ. ಗೆಲುವಿನ ಓಟವನ್ನು ಸತತ 3ನೇ ಪಂದ್ಯಕ್ಕೆ ವಿಸ್ತರಿಸುವ ಹಂಬಲದಲ್ಲಿರುವ ಕಿವೀಸ್ಗೆ ಈ ಬಾರಿ ನಾಯಕ ಕೇನ್ ವಿಲಿಯಮ್ಸನ್ ಬಲವೂ ಲಭಿಸಲಿದೆ.
ಮೊಣಕಾಲು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ವಿಲಿಯಮ್ಸನ್ ಕಿವೀಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಟಾಮ್ ಲಾಥಮ್ ನೇತೃತ್ವದಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಕಂಡ ಸರಾಗ ಜಯದಿಂದ ಕಿವೀಸ್ ಭರ್ಜರಿ ರನ್ರೇಟ್ (+1.958) ಕೂಡ ಸಂಪಾದಿಸಿದೆ. ಅತ್ತ ಬಾಂಗ್ಲಾ ಮೊದಲ ಪಂದ್ಯದಲ್ಲಿ ಆಫ್ಘನ್ ಎದುರು ಸುಲಭ ಗೆಲುವು ಕಂಡಿದ್ದರೆ, 2ನೇ ಪಂದ್ಯದಲ್ಲಿ ಇಂಗ್ಲೆಂಡ್ಗೆ ಶರಣಾಗಿತ್ತು. ಇದೀಗ ಕಿವೀಸ್ ಎದುರು ಸವಾಲೊಡ್ಡುವ ತವಕದಲ್ಲಿದೆ. ಉಭಯ ತಂಡಗಳು ಉತ್ತಮ ಸ್ಪಿನ್ನರ್ಗಳನ್ನು ಹೊಂದಿವೆ. ಹೀಗಾಗಿ ಚೆಪಾಕ್ನ ಚಿದಂಬರಂ ಕ್ರೀಡಾಂಗಣದ ಸ್ಪಿನ್-ಸ್ನೇಹಿ ಪಿಚ್ನ ಲಾಭವನ್ನು ಸಮರ್ಥವಾಗಿ ಬಳಸಿಕೊಳ್ಳಲು ಉಭಯ ತಂಡಗಳೂ ಪೈಪೋಟಿ ನಡೆಸಲಿವೆ.
ಕೇನ್ ಫಿಟ್ ಆಗಿರುವ ನಡುವೆ ಅನುಭವಿ ವೇಗಿ ಟಿಮ್ ಸೌಥಿ ಸತತ 3ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಕೇನ್ ವಾಪಸಾತಿಯಿಂದ ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ 3ನೇ ಕ್ರಮಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ ಕೇನ್ಗಾಗಿ 11ರ ಬಳಗದಲ್ಲಿ ಯಾರು ಸ್ಥಾನ ತೆರವುಗೊಳಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅಗ್ರ 3 ಮೂವರು ಬ್ಯಾಟರ್ಗಳಾದ ವಿಲ್ ಯಂಗ್, ಡೆವೊನ್ ಕಾನ್ವೇ ಮತ್ತು ಡೆರಿಲ್ ಮಿಚೆಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕಳೆದ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವಾಗ ಗಾಯಗೊಂಡಿದ್ದ ಕೇನ್ ನಂತರದಲ್ಲಿ ಇದೇ ಮೊದಲ ಪಂದ್ಯವಾಗಿರಲಿದೆ.
*ಏಕದಿನ ಮುಖಾಮುಖಿ: 41
ನ್ಯೂಜಿಲೆಂಡ್: 30
ಬಾಂಗ್ಲಾದೇಶ: 10
ರದ್ದು: 1
*ವಿಶ್ವಕಪ್ ಮುಖಾಮುಖಿ: 5
ನ್ಯೂಜಿಲೆಂಡ್: 5
ಬಾಂಗ್ಲಾದೇಶ: 0
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*ಭಾರತದಲ್ಲಿನ ವೈವಿಧ್ಯತೆಯ ಪಿಚ್ಗಳಿಗೆ ಹೊಂದಿಕೊಳ್ಳುವುದು ಎಲ್ಲ ತಂಡಗಳಿಗೆ ದೊಡ್ಡ ಸವಾಲಾಗಲಿದೆ. ಹೀಗಾಗಿ ಟೂರ್ನಿ ಆರಂಭದಲ್ಲಿರುವ ಚಿತ್ರಣ, ಅರ್ಧಹಾದಿ ಸಾಗಿದ ಬಳಿಕ ಬದಲಾಗಬಹುದು. ನಾವು ಕೂಡ ಪಿಚ್ಗೆ ತಕ್ಕಂತೆ ತಂಡದಲ್ಲಿ ಬದಲಾವಣೆಗಳನ್ನು ತರಲಿದ್ದೇವೆ.
| ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್ ನಾಯಕ