

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ಜಗತ್ತಿನ ಅತಿ ದುಬಾರಿ ವೆಚ್ಚದ ನಗರ ಆಗಿದೆ. ಹಾಂಕಾಂಗ್ನನ್ನು ಹಿಂದಿಕ್ಕಿರುವ ನ್ಯೂಯಾರ್ಕ್ನಲ್ಲಿ ಬೆಲೆಗಳು ವಿಪರೀತವಾಗಿರುವ ಕಾರಣ ಬದುಕು ನಡೆಸುವುದು ದುಬಾರಿ ಆಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಅಮೆರಿಕದಲ್ಲಿ ಹಣದುಬ್ಬರದ ಕಾರಣ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿರುವುದು ನ್ಯೂಯಾರ್ಕ್ನನ್ನು ದುಬಾರಿ ನಗರವನ್ನಾಗಿಸಿದೆ ಎಂದು ‘ಇಸಿಎ ಇಂಟರ್ನ್ಯಾಷನಲ್ಸ್ ಕಾಸ್ಟ್ ಆಫ್ ಲಿವಿಂಗ್: ರ‍್ಯಾಂಕಿಂಗ್ 2023’ ಅಧ್ಯಯನ ತಿಳಿಸಿದೆ. ಏಷ್ಯಾದ ನಗರಗಳಲ್ಲಿ ಮನೆ ಬಾಡಿಗೆ, ಅಗತ್ಯ ವಸ್ತುಗಳ ಬೆಲೆಗಳು ತೀರ ಅಧಿಕವಾಗಿಲ್ಲ. ಹೀಗಾಗಿ ಅವುಗಳ ರ್ಯಾಂಕಿಂಗ್ನಲ್ಲಿ ಸುಧಾರಣೆ ಆಗಿದೆ ಎಂದು ಇಸಿಎ ಇಂಟರ್ನ್ಯಾಷನಲ್ಸ್ ಏಷ್ಯಾ ಪ್ರಾದೇಶಿಕದ ನಿರ್ದೇಶಕ ಲೀ ಕ್ವಾನ್ ಹೇಳಿದ್ದಾರೆ.
ದುಬೈಯಲ್ಲಿ ಮನೆ ಬಾಡಿಗೆ ದುಬಾರಿಯಾದ ಕಾರಣ ಅದು ರ್ಯಾಂಕಿಂಗ್ನಲ್ಲಿ 12ನೇ ಸ್ಥಾನದಲ್ಲಿದೆ. ಯುರೋಪ್ನ ಹಲವು ದೇಶಗಳ ಕರೆನ್ಸಿ ಮೌಲ್ಯ ಕುಸಿದಿರುವ ಕಾರಣ ಈ ದೇಶಗಳ ನಗರಗಳು ಪಟ್ಟಿಯಲ್ಲಿ ಮೇಲಕ್ಕೇರಿವೆ. ಚೀನಾದಲ್ಲಿ ಹಣದುಬ್ಬರ ಸುಧಾರಣೆಯಾಗಿರುವುದರಿಂದ ಅಲ್ಲಿನ ನಗರಗಳ ಸ್ಥಾನದಲ್ಲಿ ಸುಧಾರಣೆ ಆಗಿದೆ ಎಂದು ಅವರು ವಿವರಿಸಿದ್ದಾರೆ. ಸರಕು ಮತ್ತು ಸೇವೆಯ ದರ, ಮನೆ ಬಾಡಿಗೆ ಇನ್ನಿತರ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು 120 ದೇಶಗಳ 207 ನಗರಗಳ ಪಟ್ಟಿಯನ್ನು ಇಸಿಎ ಇಂಟರ್ನ್ಯಾಷನಲ್ಸ್ ಸಿದ್ಧ ಪಡಿಸಿದೆ.
ವಲಸಿಗರಿಗೆ ಮುಂಬೈ ಭಾರತದ ದುಬಾರಿ ನಗರವಾಗಿದೆ. ದೆಹಲಿ, ಬೆಂಗಳೂರು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಮುಂಬೈ ಜಾಗತಿಕ ಶ್ರೇಯಾಂಕದಲ್ಲಿ 147ನೇ ಸ್ಥಾನದಲ್ಲಿದೆ. ನವದೆಹಲಿ 169, ಚೆನ್ನೈ 184, ಬೆಂಗಳೂರು 189, ಹೈದರಾಬಾದ್ 202, ಕೋಲ್ಕತ್ತ 211 ಮತ್ತು ಪುಣೆ 213 ನೇ ಸ್ಥಾನದಲ್ಲಿದೆ.