ಹೊಸ ವರುಷ ಸಿಡ್ನಿಯಲ್ಲಿ ಗೆದ್ದರಷ್ಟೇ ಹರುಷ; ಭಾರತಕ್ಕೆ ಸರಣಿ ಸಮಬಲ, ಟ್ರೋಫಿ ಉಳಿಸಿಕೊಳ್ಳಲು ಜಯ ಅಗತ್ಯ

web bgt5
Published on

ಸಿಡ್ನಿ: ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಸುದೀರ್ಘ ಹೋರಾಟ ಕೊನೆಯ ಮತ್ತು ನಿರ್ಣಾಯಕ ಹಂತವನ್ನು ತಲುಪಿದೆ. ಗೆಲುವಿನೊಂದಿಗೆ ಸರಣಿಯನ್ನು ಆರಂಭಿಸಿದ್ದ ಭಾರತ ತಂಡ ಇದೀಗ ಸರಣಿ ಸಮಬಲ ಸಾಧಿಸಲು ಮತ್ತು ಟ್ರೋಫಿ ಉಳಿಸಿಕೊಳ್ಳಲು ಕೊನೆಯ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಮತ್ತೆ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ. ಶುಕ್ರವಾರದಿಂದ ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯಲಿರುವ ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ನಿರ್ಣಾಯಕ ಕಾದಾಟದಲ್ಲಿ ಟೀಮ್​ ಇಂಡಿಯಾ ಮಾಡು ಇಲ್ಲವೆ ಮಡಿ ಒತ್ತಡವನ್ನು ಎದುರಿಸಲಿದೆ. ಹೊಸ ವರುಷವನ್ನು ಗೆಲುವಿನೊಂದಿಗೆ ಆರಂಭಿಸಿದರಷ್ಟೇ ಭಾರತಕ್ಕೆ ಹರುಷ ಸಿಗಲಿದೆ. ಇನ್ನು ಪಿತೃತ್ವ ರಜೆಯಿಂದಾಗಿ ಸರಣಿಯ ಮೊದಲ ಪಂದ್ಯದಿಂದ ಸ್ವತಃ ಹೊರಗುಳಿದಿದ್ದ ನಾಯಕ ರೋಹಿತ್​ ಶರ್ಮ, ಕಳಪೆ ಫಾರ್ಮ್​ನಿಂದಾಗಿ ತಂಡದ ಹಿತಾಸಕ್ತಿಯ ದೃಷ್ಟಿಯಿಂದ ಕೊನೆಯ ಪಂದ್ಯದಿಂದ ಮತ್ತೆ ಹೊರಗುಳಿಯುವ ಸ್ಥಿತಿಯಲ್ಲಿದ್ದರೆ, ಜಸ್​ಪ್ರೀತ್​ ಬುಮ್ರಾ ಮತ್ತೊಮ್ಮೆ ಹಂಗಾಮಿ ಸಾರಥ್ಯ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಸರಣಿಯಲ್ಲಿ ಪ್ರಸಕ್ತ 1-2 ಹಿನ್ನಡೆಯಲ್ಲಿರುವ ಭಾರತ ತಂಡ 10 ವರ್ಷಗಳ ಬಳಿಕ ಆಸೀಸ್​ ನೆಲದಲ್ಲಿ ಸರಣಿ ಸೋಲುವ ಭೀತಿಯಲ್ಲಿದೆ. 2018-19, 2020-21ರ ಕೊನೇ 2 ಪ್ರವಾಸಗಳಲ್ಲಿ ಸರಣಿ ಗೆದ್ದಿದ್ದ ಭಾರತ ಈ ಬಾರಿ ಅದನ್ನು ಪುನರಾವರ್ತಿಸಲು ಈಗ ಅವಕಾಶವಿಲ್ಲ. ಆದರೆ ಸನ್ನಿವೇಶದಲ್ಲಿ ಸರಣಿ ಸಮಬಲವೂ ಭಾರತದ ಉತ್ತಮ ಸಾಧನೆಯೇ ಎನಿಸಲಿದೆ. ತವರಿನಲ್ಲಿ ಕಿವೀಸ್​ ಎದುರು ವೈಟ್​ವಾಷ್​ ಅನುಭವಿಸಿ ಆಸೀಸ್​ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡ ಸರಣಿ ಸಮಬಲ ಸಾಧಿಸಿದರೆ ಡಬ್ಲ್ಯುಟಿಸಿ ಫೈನಲ್​ ಆಸೆಯನ್ನೂ ಜೀವಂತ ಉಳಿಸಿಕೊಳ್ಳಲಿದೆ.

ಡಬ್ಲ್ಯುಟಿಸಿ ಫೈನಲ್​ ಲೆಕ್ಕಾಚಾರ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿ ಫೈನಲ್​ಗೇರುವ ಆಸೆ ಜೀವಂತ ಉಳಿಸುವ ನಿಟ್ಟಿನಲ್ಲೂ ಭಾರತಕ್ಕೆ ಸಿಡ್ನಿಯಲ್ಲಿ ಗೆಲುವು ಅನಿವಾರ್ಯವೆನಿಸಿದೆ. ಸಿಡ್ನಿಯಲ್ಲಿ ಕನಿಷ್ಠ ಡ್ರಾ ಕಂಡರೂ ಭಾರತ ಫೈನಲ್​ ರೇಸ್​ನಿಂದ ಹೊರಬೀಳಲಿದೆ. ಸಿಡ್ನಿಯಲ್ಲಿ ಗೆದ್ದರೆ, ಆಸೀಸ್​-ಶ್ರೀಲಂಕಾ ನಡುವೆ ಜ.29ರಿಂದ ಫೆ.10ರ ನಡುವೆ ನಡೆಯುವ 2 ಪಂದ್ಯಗಳ ಟೆಸ್ಟ್​ ಸರಣಿ ಭಾರತದ ಭವಿಷ್ಯ ನಿರ್ಧರಿಸಲಿದೆ. ಲಂಕಾ 1-0ಯಿಂದ ಸರಣಿ ಗೆದ್ದರೆ, ಸರಣಿ 0-0 ಸಮಬಲವಾದರೆ ಭಾರತ ಫೈನಲ್​ಗೇರಲಿದೆ. ಸಿಡ್ನಿ ಟೆಸ್ಟ್​ ಗೆದ್ದರೆ ಆಸೀಸ್​, ಲಂಕಾ ಸರಣಿಗೆ ಮುನ್ನವೇ ಫೈನಲ್​ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ.

ತಂಡಕ್ಕಾಗಿ ರೋಹಿತ ತ್ಯಾಗ?

ಗೆಲುವಿನ ಅನಿವಾರ್ಯತೆಯಲ್ಲಿರುವ ಭಾರತ ತಂಡದ ಹಿತದೃಷ್ಟಿಯಿಂದ ಸ್ವತಃ ನಾಯಕ ರೋಹಿತ್​ ಶರ್ಮ ಸಿಡ್ನಿ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಗೆ ಹಾಜರಾದ ಕೋಚ್​ ಗೌತಮ್​ ಗಂಭೀರ್​, ರೋಹಿತ್​ ಆಡುವ ಅಥವಾ ಆಡದಿರುವ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ. ಆದರೆ ನಂತರ ನಡೆದ ಬೆಳವಣಿಗೆಗಳಲ್ಲಿ 37 ವರ್ಷದ ರೋಹಿತ್​ ಸಿಡ್ನಿ ಟೆಸ್ಟ್​ನಿಂದ ಹೊರಗುಳಿಯುವ ಸ್ಪಷ್ಟ ಸೂಚನೆ ರವಾನೆಯಾಗಿದೆ. ಸರಣಿಯ 5 ಇನಿಂಗ್ಸ್​ಗಳಲ್ಲಿ ಕೇವಲ 31 ರನ್​ ಗಳಿಸಿರುವ ರೋಹಿತ್​ ಶರ್ಮ ಫಾರ್ಮ್ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಇದರಿಂದಾಗಿ ರೋಹಿತ್​ ಟೀಮ್​ ಇಂಡಿಯಾದ ಪಾಲಿಗೆ ಸದ್ಯ "ಬಿಳಿ ಆನೆ'ಯಂತಾಗಿದ್ದಾರೆ. ಯುವ ಬ್ಯಾಟರ್​ ಶುಭಮಾನ್​ ಗಿಲ್​ಗೆ ತಂಡದಲ್ಲಿ ಸ್ಥಾನ ಕಲ್ಪಿಸಿ ಬ್ಯಾಟಿಂಗ್​ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲೂ ರೋಹಿತ್​ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಡ್ನಿಯಲ್ಲಿ ಗುರುವಾರ ಭಾರತ ತಂಡದ ಅಭ್ಯಾಸದ ವೇಳೆ ಗಂಭೀರ್​, ರೋಹಿತ್​ ಮತ್ತು ಬುಮ್ರಾ ಜತೆಗೆ ಬಿಸಿಬಿಸಿ ಚರ್ಚೆಗಳನ್ನು ನಡೆಸಿದ್ದಾರೆ. ಇದು ರೋಹಿತ್​ರನ್ನು ಆಡುವ ಬಳಗದಿಂದ ಹೊರಗುಳಿಯಲು ಮನವೊಲಿಸುವ ಮತ್ತು ಬುಮ್ರಾರನ್ನು ಮತ್ತೆ ನಾಯಕತ್ವಕ್ಕೆ ಮಾನಸಿಕವಾಗಿ ಸಜ್ಜುಗೊಳಿಸುವ ಪ್ರಯತ್ನ ಎಂದು ಹೇಳಲಾಗಿದೆ. ರೋಹಿತ್​ ಸಿಡ್ನಿಯಲ್ಲಿ ಆಡದಿದ್ದರೆ ಕಳೆದ ಮೆಲ್ಬೋರ್ನ್​ ಪಂದ್ಯವೇ ಅವರ ವೃತ್ತೀಜಿವನದ ಕೊನೇ ಟೆಸ್ಟ್​ ಆಗುವ ಸಾಧ್ಯತೆ ಅಧಿಕವಾಗಿದೆ. ಯಾಕೆಂದರೆ ಭಾರತ ಡಬ್ಲ್ಯುಟಿಸಿ ಫೈನಲ್​ಗೇರುವ ಸಾಧ್ಯತೆ ಸದ್ಯ ಕ್ಷೀಣವಾಗಿದೆ. ಅಲ್ಲದೆ 2025-27ರ ಆವೃತ್ತಿಯ ಡಬ್ಲ್ಯುಟಿಸಿಯ ಮೊದಲ ಸರಣಿಯನ್ನು ಜೂನ್​ ಅಂತ್ಯದಲ್ಲಿ ಆಡಲಿರುವ ಭಾರತ ಆಗ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಹಿಂದೆ 2021-23ರ ಡಬ್ಲ್ಯುಟಿಸಿ ಬಳಿಕ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರರನ್ನು ಭಾರತ ಇಂಥದ್ದೇ ಕಾರಣಕ್ಕಾಗಿ ಕಡೆಗಣಿಸಿತ್ತು.

ಸ್ಥಾನ ತ್ಯಜಿಸುವ ಮೊದಲ ನಾಯಕ

ರೋಹಿತ್​ ಶರ್ಮ ಹೊರಗುಳಿದರೆ, ಸಂಪೂರ್ಣ ಫಿಟ್​ ಇದ್ದರೂ, ತಂಡದ ಹಿತಕ್ಕಾಗಿ ಸರಣಿಯ ನಡುವೆ ತಂಡದ ಆಡುವ 11ರ ಬಳಗದಿಂದ ಹೊರಗುಳಿದ ಮೊದಲ ಭಾರತೀಯ ನಾಯಕ ಎನಿಸಲಿದ್ದಾರೆ. ಇದರ ಹೊರಗಾಗಿ ಈ ಹಿಂದೆ ಅನಿಲ್​ ಕುಂಬ್ಳೆ ಮತ್ತು ಎಂಎಸ್​ ಧೋನಿ ಟೆಸ್ಟ್​ ಸರಣಿಯ ನಡುವೆಯೇ ನಿವೃತ್ತಿ ಹೇಳಿದ್ದ ದೃಷ್ಟಾಂತಗಳಷ್ಟೇ ಇವೆ.

2014ರಲ್ಲಿ ಸ್ಥಾನ, ನಾಯಕತ್ವ ತ್ಯಜಿಸಿ ಶ್ರೀಲಂಕಾದ

ಟಿ20 ವಿಶ್ವಕಪ್​ ಜಯಕ್ಕೆ ನೆರವಾಗಿದ್ದ ಚಾಂಡಿಮಲ್​!

ರೋಹಿತ್​ ಶರ್ಮ ಸಿಡ್ನಿ ಟೆಸ್ಟ್​ನಿಂದ ಸ್ವತಃ ಹೊರಗುಳಿದು ಭಾರತ ತಂಡದ ಗೆಲುವಿಗೆ ನೆರವಾದರೆ ಅದು ಅವರ ನಿಸ್ವಾರ್ಥ ಮನೋಭಾವ ಮತ್ತು ತ್ಯಾಗದ ಗೆಲುವು ಆಗಲಿದೆ. 2014ರಲ್ಲಿ ಶ್ರೀಲಂಕಾ ತಂಡದ ಆಗಿನ ನಾಯಕ ದಿನೇಶ್​ ಚಾಂಡಿಮಲ್​ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಂದ ಹೊರಗುಳಿದು ಶ್ರೀಲಂಕಾ ತಂಡದ ಚೊಚ್ಚಲ ಟಿ20 ವಿಶ್ವಕಪ್​ ಗೆಲುವಿಗೆ ನೆರವಾಗಿದ್ದನ್ನು ಇದು ನೆನಪಿಸುತ್ತಿದೆ. ವಿಶ್ವಕಪ್​ ವೇಳೆ ಚಾಂಡಿಮಲ್​ 7 ಟಿ20 ಪಂದ್ಯಗಳಲ್ಲಿ ಕೇವಲ 65 ರನ್​ ಗಳಿಸಿ ಫಾರ್ಮ್​ನಲ್ಲಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ಸೆಮೀಸ್​, ಫೈನಲ್​ನಿಂದ ಸ್ವತಃ ಹೊರಗುಳಿದಿದ್ದ ಚಾಂಡಿಮಲ್​, ಲಹಿರು ತಿರಿಮನ್ನೆಗೆ ತಂಡದಲ್ಲಿ ಸ್ಥಾನ ಮತ್ತು ಲಸಿತ್​ ಮಾಲಿಂಗಗೆ ನಾಯಕತ್ವ ಬಿಟ್ಟುಕೊಟ್ಟಿದ್ದರು. ಇವೆರಡು ಪಂದ್ಯಗಳಲ್ಲಿ ವೆಸ್ಟ್​ ಇಂಡೀಸ್​, ಭಾರತ ತಂಡಗಳನ್ನು ಮಣಿಸಿ ಲಂಕಾ ಟಿ20 ವಿಶ್ವಕಪ್​ ಗೆದ್ದಿತ್ತು. ಟೂರ್ನಿಯ ನಂತರದಲ್ಲಿ ಚಾಂಡಿಮಲ್​ ಮತ್ತೆ ಮೂರೂ ಪ್ರಕಾರದಲ್ಲಿ ಲಂಕಾ ನಾಯಕತ್ವ ವಹಿಸಿಕೊಂಡಿದ್ದರು.

ಟೀಮ್​ ನ್ಯೂಸ್​:

ಭಾರತ: ಟಾಸ್​ಗೆ ಮುನ್ನ ಪಿಚ್​ ಪರಿಶೀಲಿಸಿ ಆಡುವ 11ರ ಬಳಗವನ್ನು ಅಂತಿಮಗೊಳಿಸಲಿದ್ದೇವೆ ಎಂದು ಕೋಚ್​ ಗಂಭೀರ್​ ಹೇಳಿರುವ ನಡುವೆಯೂ, ನಾಯಕ ರೋಹಿತ್​ ಶರ್ಮ ಹೊರಗುಳಿಯುವ ಸಾಧ್ಯತೆ ಸ್ಪಷ್ಟವಾಗಿದೆ. ರೋಹಿತ್​ ಬದಲಿಗೆ ಶುಭಮಾನ್​ ಗಿಲ್​ ತಂಡದಲ್ಲಿ ಸ್ಥಾನ ಪಡೆದರೆ, ಜಸ್​ಪ್ರೀತ್​ ಬುಮ್ರಾ ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಮತ್ತು ಕನ್ನಡಿಗ ಕೆಎಲ್​ ರಾಹುಲ್​ ಮತ್ತೊಮ್ಮೆ ಆರಂಭಿಕರಾಗಿ ಆಡಲಿದ್ದಾರೆ ಎನ್ನಲಾಗಿದೆ. ಇದಲ್ಲದೆ ಬೆನ್ನು ನೋವಿನಿಂದಾಗಿ ವೇಗಿ ಆಕಾಶ್​ದೀಪ್​ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಸ್ಥಾನ ತುಂಬಲು ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಹರ್ಷಿತ್​ ರಾಣಾ ನಡುವೆ ಪೈಪೋಟಿ ಇದೆ. ಇನ್ನು ವಾಷಿಂಗ್ಟನ್​ ಸುಂದರ್​ ಬದಲಿಗೆ ಧ್ರುವ ಜುರೆಲ್​ ಬ್ಯಾಟರ್​ ಆಗಿ ಸ್ಥಾನ ಪಡೆಯುವ ನಿರೀೆ ಇದೆ.

ಆಸ್ಟ್ರೆಲಿಯಾ: ಎಂದಿನಂತೆ ಆತಿಥೇಯರು ಈ ಸಲವೂ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಅಂತಿಮಗೊಳಿಸಿದ್ದಾರೆ. ಇದರನ್ವಯ ಮಿಚೆಲ್​ ಮಾರ್ಷ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಬಲಗೈ ಬ್ಯಾಟಿಂಗ್​, ಮಧ್ಯಮ ವೇಗ ಮತ್ತು ಆ್​ ಸ್ಪಿನ್​ ಬೌಲಿಂಗ್​ ನಡೆಸಬಲ್ಲ ಆಲ್ರೌಂಡರ್​ ಬೆಯು ವೆಬ್​ಸ್ಟರ್​ 31ನೇ ವಯಸ್ಸಿನಲ್ಲಿ ಬ್ಯಾಗಿ ಗ್ರೀನ್​ ಕ್ಯಾಪ್​ ಪಡೆಯಲು ಸಜ್ಜಾಗಿದ್ದಾರೆ. ಮೆಕ್​ಸ್ವೀನ್​ ಮತ್ತು ಕಾನ್​ಸ್ಟಾಸ್​ ಬಳಿಕ ಅವರು ಸರಣಿಯಲ್ಲಿ ಆಸೀಸ್​ ಪರ ಪದಾರ್ಪಣೆ ಮಾಡುತ್ತಿರುವ 3ನೇ ಆಟಗಾರರೆನಿಸಿದ್ದಾರೆ. ಪಕ್ಕೆಲುಬು ನೋವಿನ ನಡುವೆ ಮೆಲ್ಬೋರ್ನ್​ನಲ್ಲಿ ಬೌಲಿಂಗ್​ ಮಾಡಿದ್ದ ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ ಸಿಡ್ನಿ ಟೆಸ್ಟ್​ಗೆ ಫಿಟ್​ ಆಗಿದ್ದಾರೆ.

ಆರಂಭ: ಬೆಳಗ್ಗೆ 5.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಪಿಚ್​ ರಿಪೋರ್ಟ್​

ಎಸ್​ಸಿಜಿ ಪಿಚ್​ನಲ್ಲಿ ಕ್ಯುರೇಟರ್​ ಪಂದ್ಯಕ್ಕೆ ಮುನ್ನಾದಿನವೂ ಸ್ವಲ್ಪ ಪ್ರಮಾಣದ ಹಸಿರು ಹುಲ್ಲು ಉಳಿಸಿದ್ದಾರೆ. ಬೌಲರ್​ಗಳಿಗೆ ಇದು ಹೆಚ್ಚಿನ ನೆರವು ನೀಡಿದರೂ ಸ್ಪರ್ಧಾತ್ಮಕವಾಗಿರಲಿದೆ ಎನ್ನಲಾಗಿದೆ. ಪಂದ್ಯದ ಕೊನೇ 2 ದಿನ ಮಳೆ ಅಡಚಣೆ ತರುವ ಸಾಧ್ಯತೆ ಇದೆ.

*38: ಸ್ಟೀವನ್​ ಸ್ಮಿತ್​ ಇನ್ನು 38 ರನ್​ ಗಳಿಸಿದರೆ ಅಲನ್​ ಬಾರ್ಡರ್​, ಸ್ಟೀವನ್​ ಸ್ಮಿತ್​, ರಿಕಿ ಪಾಂಟಿಂಗ್​ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಕಲೆಹಾಕಿದ 4ನೇ ಆಸೀಸ್​ ಬ್ಯಾಟರ್​ ಎನಿಸಲಿದ್ದಾರೆ.

*3: ಜಸ್​ಪ್ರೀತ್​ ಬುಮ್ರಾ (30) ಇನ್ನು 3 ವಿಕೆಟ್​ ಕಬಳಿಸಿದರೆ ಬಾರ್ಡರ್​-ಗಾವಸ್ಕರ್​ ಟ್ರೋಫಿಯ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಬೌಲರ್​ ಎನಿಸಲಿದ್ದಾರೆ. 2000-01ರ ಸರಣಿಯಲ್ಲಿ ಹರ್ಭಜನ್​ ಸಿಂಗ್​ 32 ವಿಕೆಟ್​ ಕಬಳಿಸಿದ್ದು ಹಾಲಿ ದಾಖಲೆಯಾಗಿದೆ.

*ಕೋಚ್​ ಮತ್ತು ಆಟಗಾರರ ಮಾತುಕತೆ ಯಾವಾಗಲೂ ಡ್ರೆಸ್ಸಿಂಗ್​ ರೂಮ್​ನಲ್ಲೇ ಉಳಿಯಬೇಕು. ವರದಿಗಳೆಲ್ಲ ನಿಜವಾಗಿರಬೇಕೆಂದಿಲ್ಲ. ಪ್ರಾಮಾಣಿಕ ವ್ಯಕ್ತಿಗಳು ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವವರೆಗೆ ಭಾರತೀಯ ಕ್ರಿಕೆಟ್​ ಸುರತವಾಗಿರುತ್ತದೆ. ಉತ್ತಮ ನಿರ್ವಹಣೆ ತೋರಿದರಷ್ಟೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಉಳಿದುಕೊಳ್ಳಲು ಸಾಧ್ಯ. ವೈಯಕ್ತಿಕ ಕ್ರೀಡೆಗಳಲ್ಲಿ ಆಟಗಾರರು ಸ್ವಾಭಾವಿಕ ಆಟವಾಡಬಹುದು. ಆದರೆ ತಂಡ ಕ್ರೀಡೆಯಲ್ಲಿ ತಂಡಕ್ಕಾಗಿ ಆಡುವುದು ಅಗತ್ಯ ಎಂಬುದು ನನ್ನ ಸೂತ್ರವಾಗಿದೆ.

| ಗೌತಮ್​ ಗಂಭೀರ್​, ಭಾರತ ತಂಡದ ಕೋಚ್​

6: ಬುಮ್ರಾ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿದರೆ, ಟೆಸ್ಟ್​ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಭಾರತೀಯ ಬೌಲರ್​ ಎನಿಸಲಿದ್ದಾರೆ. ಕನ್ನಡಿಗ ಬಿಎಸ್​ ಚಂದ್ರಶೇಖರ್​ 1972-73ರ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 35 ವಿಕೆಟ್​ ಕಬಳಿಸಿರುವುದು ಹಾಲಿ ದಾಖಲೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net