ಮುಂಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಜನವರಿ 22ರಿಂದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ 15 ಆಟಗಾರ ಭಾರತ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದ್ದು, ವೇಗಿ ಮೊಹಮದ್ ಶಮಿ ಸುಮಾರು 14 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಕಂಡಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಸಹಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಿದ್ದ ನಾಲ್ವರು ಆಟಗಾರರಷ್ಟೇ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2023ರ ನ.19ರಂದು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದ 34 ವರ್ಷದ ಶಮಿ, ಪಾದದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಮರಳಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸಿರುವ ಶಮಿ, ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡುವ ಸಾಧ್ಯತೆ ಹೆಚ್ಚಳವಾಗಿದೆ. ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ತಂಡದಲ್ಲಿರುವ ಇತರ ಪ್ರಮುಖ ಆಟಗಾರರಾಗಿದ್ದಾರೆ.
ಅಕ್ಷರ್ ಪಟೇಲ್ ಉಪನಾಯಕ
ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಟಿ20 ತಂಡಕ್ಕೆ ಹೊಸ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಸಂಜು ಸ್ಯಾಮ್ಸನ್ ಜತೆಗೆ ಧ್ರುವ ಜುರೆಲ್ ತಂಡದಲ್ಲಿರುವ 2ನೇ ವಿಕೆಟ್ ಕೀಪರ್ ಆಗಿದ್ದಾರೆ. ರಿಷಭ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ಗೂ ವಿಶ್ರಾಂತಿ ನೀಡಲಾಗಿದ್ದು, ಅಭಿಷೇಕ್ ಶರ್ಮ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ನಿತೀಶ್ ರೆಡ್ಡಿ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೋರ್ವ ಆಲ್ರೌಂಡರ್ ಶಿವಂ ದುಬೆಗೆ ಕೊಕ್ ನೀಡಲಾಗಿದೆ.
ಟಿ20 ಸರಣಿಯ 5 ಪಂದ್ಯಗಳು ಕ್ರಮವಾಗಿ ಕೋಲ್ಕತ (ಜ.22), ಚೆನ್ನೆ$ (ಜ.25), ರಾಜ್ಕೋಟ್ (ಜ.28), ಪುಣೆ (ಜ.31), ಮುಂಬೈನಲ್ಲಿ (ಫೆ.2) ನಡೆಯಲಿವೆ. ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ಆಡಿದ್ದ ಹೆಚ್ಚಿನ ಐಪಿಎಲ್ ತಾರೆಯರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಭುಜದ ಗಾಯದಿಂದಾಗಿ ರಿಯಾನ್ ಪರಾಗ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಭಾರತ ಟಿ20 ತಂಡ: ಸೂರ್ಯಕುಮಾರ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಧ್ರುವ ಜುರೆಲ್ (ವಿ.ಕೀ).
ಏಕದಿನ ತಂಡ ಪ್ರಕಟ ವಿಳಂಬ
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಮಾತ್ರ ಭಾರತ ತಂಡ ಪ್ರಕಟಗೊಂಡಿದ್ದು, ಫೆ. 6ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತಂಡ ಆಯ್ಕೆ ವಿಳಂಬಗೊಂಡಿದೆ. ಚಾಂಪಿಯನ್ಸ್ ಟ್ರೋಫಿಗೆ ಪ್ರಾಥಮಿಕ ತಂಡ ಪ್ರಕಟಿಸಲು ಭಾನುವಾರ ಕೊನೇ ದಿನವಾಗಿದ್ದರೂ, ಹೆಚ್ಚುವರಿ ಸಮಯ ನೀಡುವಂತೆ ಐಸಿಸಿಗೆ ಬಿಸಿಸಿಐ ಮನವಿ ಸಲ್ಲಿಸಿದೆ ಎನ್ನಲಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಬಗೆಗಿನ ಗೊಂದಲ ಇದಕ್ಕೆ ಪ್ರಮುಖ ಕಾರಣವೆನಿಸಿದೆ.
ಪರಾಮರ್ಶೆ ಸಭೆಯಲ್ಲಿ ರೋಹಿತ್, ಗಂಭೀರ್
ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ತೋರಿದ ನಿರ್ವಹಣೆಯ ಬಗ್ಗೆ ನಾಯಕ ರೋಹಿತ್ ಶರ್ಮ, ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆಗೆ ಬಿಸಿಸಿಐ ಅಧಿಕಾರಿಗಳು ಶನಿವಾರ ಮುಂಬೈನಲ್ಲಿ ಪರಾಮರ್ಶೆ ಸಭೆ ನಡೆಸಿದರು. ಈ ವೇಳೆ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಚರ್ಚಿಸಲಾಯಿತು ಎನ್ನಲಾಗಿದೆ. ಭಾರತ ತಂಡದಲ್ಲಿನ ಸ್ಥಿತ್ಯಂತರವನ್ನು ನಿಭಾಯಿಸುವ ಬಗ್ಗೆ ಕೋಚ್ ಗಂಭೀರ್ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಯಿತು ಎನ್ನಲಾಗಿದೆ.
ಮಹಿಳಾ ಕ್ರಿಕೆಟ್ನಲ್ಲಿ ಮನಗೆದ್ದ ಮನೋವಿಜ್ಞಾನ ವಿದ್ಯಾರ್ಥಿನಿ ಪ್ರತೀಕಾ ರಾವಲ್!