ಅವ್ಯವಹಾರಗಳಿಗೆ ಹೊಸ ತಂತ್ರಾಂಶ ಅಂಕುಶ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

IMG-20241002-WA0024
Published on

ಬೆಂಗಳೂರು: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕೆಲಸಗಳ ಮೇಲ್ವಿಚಾರಣೆ ಉದ್ದೇಶಿತ ಹೊಸ ತಂತ್ರಾಂಶ ಕಾರ್ಯಾರಂಭಿಸಿದೆ. ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವು ಅವ್ಯವಹಾರಗಳಿಗೆ ಅಂಕುಶ ಹಾಕಿ, ನಿರ್ವಹಿಸುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ಮಾಹಿತಿಗಳು, ಕಾಮಗಾರಿಗಳನ್ನು ವಹಿಸುವ ಇಲಾಖೆಗಳಿಂದ ಬಿಡುಗಡೆಯಾಗುವ ಅನುದಾನದ ಸ್ವೀಕೃತಿ ಹಾಗೂ ಬಳಕೆ ದಾಖಲಾಗಲಿದೆ.

ಸೂಕ್ತ ರೀತಿಯಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮುಂತಾದ ವಿವಿಧ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗಾಂಧಿ ಸಾಕ್ಷಿ ಕಾಯಕ 2.0 (ವರ್ಕ್ ಮಾನಿಟರಿಂಗ್ ಸಿಸ್ಟಂ) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ನೂತನ ತಂತ್ರಾಂಶ ಲೋಕಾರ್ಪಣೆ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತಿಳಿಸಿದರು.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾಲಮಿತಿ, ಗುಣಮಟ್ಟ

ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ರಾಜ್ಯಾದ್ಯಂತ ತನ್ನ ಜಾಲವನ್ನು ಹೊಂದಿದ್ದು, ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ನಿರ್ಮಾಣ ಯೋಜನೆಗಳು ಹಾಗೂ ವಿವಿಧ ಇಲಾಖೆಗಳು ವಹಿಸುವ ಕಟ್ಟಡಗಳು, ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳನ್ನು ಕಳೆದ 51 ವರ್ಷಗಳಿಂದ ನಿಗದಿತ ಕಾಲಾವಧಿಯಲ್ಲಿ ಉತ್ತಮ ಗುಣಮಟ್ಟದಿಂದ ಅನುಷ್ಠಾನಗೊಳಿಸುತ್ತಿದೆ ಎಂದರು.

ಕೆಆರ್‌ಐಡಿಎಲ್ ಸಂಸ್ಥೆಯ ವಹಿವಾಟನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಾಂಶದ ಅವಶ್ಯಕತೆ ಇದ್ದ ಕಾರಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗರ‍್ನೆನ್ಸ್ ಮೂಲಕ ಈ ತಂತ್ರಾಂಶ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ತಂತ್ರಾಂಶದ ಮುಖ್ಯಾಂಶಗಳು

• ಕಾಮಗಾರಿ ವಹಿಸುವ ಇಲಾಖೆಗಳು ಅನುದಾನಗಳನ್ನು ನಿಗಮದ ಕೇಂದ್ರ ಕಛೇರಿಯ ಖಾತೆಗೆ ನೇರವಾಗಿ ಜಮೆ ಮಾಡುವ ಸೌಲಭ್ಯವನ್ನು ಒಳಗೊಂಡ ಈ ತಂತ್ರಾಂಶ ಗ್ರೂಪ್ ಲೀಡರ್‌ಗಳು ಮತ್ತು ಸಾಮಗ್ರಿಗಳ ಸರಬರಾಜುದಾರರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಇವರಿಗೆ ಆನ್ ಲೈನ್ ಮೂಲಕ ಹಣ ಬಿಡುಗಡೆ ಮಾಡಬಹುದಾಗಿದೆ

• ಕಾಮಗಾರಿಗಳ ನಿರ್ವಹಣೆಗಾಗಿ ಕೇಂದ್ರ ಕಛೇರಿಯ ಖಾತೆಯಿಂದ ಉಪವಿಭಾಗಗಳಿಗೆ ಅನುದಾನ ಬಿಡುಗಡೆ

• ಕಾಮಗಾರಿಗಳ ಪ್ರಗತಿಯ ವಿವಿಧ ಹಂತಗಳ ಛಾಯಾಚಿತ್ರಗಳ ಜಿಯೋ ಟ್ಯಾಗ್‌ಛಾಯಾಚಿತ್ರಗಳ ಆರೋಹಣ

• ಕಾಮಗಾರಿಗಳ ಲೆಕ್ಕಪತ್ರಗಳ ನಿರ್ವಹಣೆ

ಅನುಕೂಲತೆಗಳು

• ಕಾಮಗಾರಿ ವಹಿಸುವ ಇಲಾಖೆಗಳು ಬಿಡುಗಡೆ ಮಾಡುವ ಅನುದಾನಗಳ ಯೋಜನಾವಾರು ಬಿಡುಗಡೆ, ಕಾಮಗಾರಿಗಳ ಪ್ರಗತಿಗೆ ವ್ಯಯಿಸಲಾದ ವೆಚ್ಚ, ಉಳಿಕೆ ಅನುದಾನಗಳ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.

• ಜಿಯೋ ಟ್ಯಾಗ್ ಹಾಗೂ ಜಿಯೋ ಫೆನ್ಸಿಂಗ್ ಛಾಯಾಚಿತ್ರಗಳ ಆರೋಹಣ ಮಾಡುವ ಕಾರಣದಿಂದ, ಡೂಪ್ಲಿಕೇಟ್ ಕಾಮಗಾರಿಗಳನ್ನು ನಿರ್ವಹಿಸುವ ಸಾಧ್ಯತೆಗಳನ್ನು ತಡೆಯಬಹುದು

• ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಾದ ಸಾಮಗ್ರಿಗಳ ಖರೀದಿ, ವಿತರಣೆ ಮುಂತಾದ ವಿವರಗಳನ್ನು ದಾಖಲಿಸುವ ಕಾರಣದಿಂದ ಸಾಮಗ್ರಿಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಪಡೆಯಲು ಅನುಕೂಲವಾಗುವುದು.

• ಪ್ರತಿ ಕಾಮಗಾರಿಯ ವಿವಿಧ ಹಂತಗಳ ಪ್ರಗತಿಯ ವಿವರಗಳು, ಛಾಯಾಚಿತ್ರಗಳು, ಆ ಕಾಮಗಾರಿಗೆ ಬಿಡುಗಡೆಯಾದ ಅನುದಾನ, ವೆಚ್ಚ ಹಾಗೂ ಉಳಿದಿರುವ ಅನುದಾನ ಲಭ್ಯತೆಯ ವಿವರಗಳು ನೈಜಸಮಯದಲ್ಲೇ ಲಭ್ಯವಾಗುವ ಕಾರಣ ಕಾಮಗಾರಿಗಳಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.

• ಕಾಮಗಾರಿಗಳ ಅಂದಾಜು ಮೊತ್ತ ಹಾಗೂ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚ ಮಾಡುವುದು ಹಾಗೂ ಆಯಾ ಕಾಮಗಾರಿಗಾಗಿ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಸಾಧ್ಯವಾಗದಂತೆ ತಡೆಯಬಹುದಾಗಿರುತ್ತದೆ.

• ಈ ತಂತ್ರಾಂಶವು ಜಿ.ಎಸ್.ಟಿ-ವ್ಯಾಲಿಡೇಶನ್ ಆಪ್ ಹೊಂದಿರುವ ಕಾರಣ ನಕಲಿ ಅಥವಾ ಅಸಮರ್ಪಕ ಜಿ.ಎಸ್.ಟಿ ಸಂಖ್ಯೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ಜಿ.ಎಸ್.ಟಿ ಬಿಲ್‌ಗಳ ನಿರ್ವಹಣೆ ಸುಲಭಸಾಧ್ಯವಾಗಲಿದ್ದು, ತನ್ಮೂಲಕ ಮೊತ್ತಗಳ ನಿಗಮಕ್ಕೆ ಉಂಟಾಗುವ ಸಂಭವನೀಯ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ

• ಹಣಕಾಸಿನ ವ್ಯವಹಾರದ ಸುರಕ್ಷೆತೆಗಾಗಿ DSC (Digital Signature Key) ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ

• ಲಾಗಿನ್ ಸುರಕ್ಷತೆಗಾಗಿ SMS ಮತ್ತು OTP ಸೌಲಭ್ಯವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ

• ಈ ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವ ಕಾರಣದಿಂದ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಕಾಲಾವಧಿಯೊಳಗೆ ಅಂತಿಮಗೊಳಿಸಲು ಅನುಕೂಲವಾಗುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net