ನಗರ ನಕ್ಸಲರನ್ನು ಗುರುತಿಸಿ ಬಯಲಿಗೆಳೆಯಬೇಕಿದೆ; ಪ್ರಧಾನಿ Narendra Modi

Untitled design - 2024-10-31T123619.439
Published on

ಕೆವಾಡಿಯಾ: ದೇಶವನ್ನು ಅಸ್ಥಿರಗೊಳಿಸಲು ಭಾರತದ ಒಳಗೆ ಮತ್ತು ಹೊರಗೆ ಕೆಲವು ಶಕ್ತಿಗಳು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಗುರುವಾರ(ಅಕ್ಟೋಬರ್​ 31) ಹೇಳಿದರು.

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ನಂತರ ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿನ 'ಏಕತೆಯ ಪ್ರತಿಮೆ' ಬಳಿ ಮಾತನಾಡಿದರು. 2014 ರಿಂದ ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿನ' ಎಂದು ಆಚರಿಸಲಾಗುತ್ತದೆ.

ಭಾರತದ ಒಳಗೆ ಮತ್ತು ಹೊರಗೆ ಕೆಲವು ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಮತ್ತು ಜಗತ್ತಿನಲ್ಲಿ ಅದರ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಅರಾಜಕತೆಯನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು. ಕಾಡುಗಳಲ್ಲಿ ನಕ್ಸಲಿಸಂ ಅಂತ್ಯವಾಗುತ್ತಿದ್ದಂತೆ ಹೊಸ ಮಾದರಿಯ ನಗರ ನಕ್ಸಲೀಯರು ಹುಟ್ಟಿಕೊಳ್ಳುತ್ತಿದ್ದಾರೆ. ನೀವು ಒಗ್ಗಟ್ಟಾಗಿ ಇದ್ದರೆ ನೀವು ಸುರಕ್ಷಿತವಾಗಿರುತ್ತೀರಿ ಎಂದು ಹೇಳುವ ಜನರನ್ನು ನಗರ ನಕ್ಸಲೀಯರು ಗುರಿಯಾಗಿಸಿಕೊಂಡಿದ್ದಾರೆ. ದೇಶವು ನಗರ ನಕ್ಸಲರನ್ನು ಗುರುತಿಸಬೇಕಾಗಿದೆ. ನಗರ ನಕ್ಸಲೀಯರನ್ನು ಗುರುತಿಸಿ ಬಯಲಿಗೆಳೆಯಬೇಕು. ಕಳೆದ 10 ವರ್ಷಗಳ ಸರ್ಕಾರದ ಪ್ರಯತ್ನದಿಂದಾಗಿ ಭಾರತದಲ್ಲಿ ನಕ್ಸಲಿಸಂ ಕೊನೆಯುಸಿರೆಳೆದಿದೆ ಎಂದರು.

ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸುವ ಜನರಿದ್ದರೂ ಸರ್ದಾರ್ ಪಟೇಲ್ ಅದನ್ನು ಸಾಧ್ಯವಾಗಿಸಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಪಟೇಲರ 150ನೇ ಜಯಂತಿಯನ್ನು ದೇಶ ಆಚರಿಸಲಿದೆ. ಎಂದರು. 'ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ' ಜಾರಿಯತ್ತ ನಮ್ಮ ದೇಶ ಸಾಗುತ್ತಿದ್ದು, ಇದು ನಮ್ಮ ದೇಶವನ್ನು ಬಲಪಡಿಸಲಿದೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಚುನಾವಣೆ' ಉಪಕ್ರಮವನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ಸರ್ಕಾರದ ದೂರದೃಷ್ಟಿಯು ರಾಷ್ಟ್ರೀಯ ಏಕತೆಯ ಕಡೆಗೆ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರವು 'ಒಂದು ರಾಷ್ಟ್ರ, ಒಂದು ತೆರಿಗೆ' ವ್ಯವಸ್ಥೆಯನ್ನು ತಂದಿದೆ ಮತ್ತು 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದೆ. ಇದರಿಂದ 70 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net