

ನವದೆಹಲಿ: ಲೋಕಸಭೆಯಲ್ಲಿ ಮಂಡನೆಯಾಗಿದ್ದ ಆದಾಯ ತೆರಿಗೆ ಮಸೂದೆ-2025 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿಂಪಡೆದಿದ್ದು, ಆಗಸ್ಟ್ 11ರಂದು ಹೊಸ ಆದಾಯ ತೆರಿಗೆ ಮಸೂದೆ-2025 ಅನ್ನು ಮಂಡನೆ ಮಾಡಲಾಗುವುದು.
ಆಯ್ಕೆ ಸಮಿತಿ ಸೂಚಿಸಿರುವ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಮಸೂದೆ ಮಂಡಿಸಲಾಗುವುದು. ಈ ಮೂಲಕ ಮಸೂದೆಯಲ್ಲಿನ ಗೊಂದಲ ತಪ್ಪಿಸಿ, ಸ್ಪಷ್ಟ ಮತ್ತು ನವೀಕೃತ ಆವೃತ್ತಿಯ ಮಸೂದೆ ಮಂಡಿಸಲು ಹಳೆಯ ಮಸೂದೆ ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರು ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆ, 1961 ಅನ್ನು ಬದಲಿಸಲು ಆದಾಯ ತೆರಿಗೆ ಮಸೂದೆ, 2025 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಬಳಿಕ ಮಸೂದೆಯನ್ನು ಜೈಜಯಂತ್ ಪಾಂಡಾ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಗೆ ಹಸ್ತಾಂತರಿಸಲಾಗಿತ್ತು. 31 ಸದಸ್ಯರ ಆಯ್ಕೆ ಸಮಿತಿ ಮಸೂದೆಯಲ್ಲಿ ಹಲವು ಬದಲಾವಣೆ ತರುವಂತೆ ಕಳೆದ ಫೆಬ್ರವರಿಯಲ್ಲಿ ಸಲಹೆ ನೀಡಿತ್ತು.
ಹೊಸ ಕಾನೂನಿನ ಅಡಿಯಲ್ಲಿ ಧಾರ್ವಿುಕ ಮತ್ತು ದತ್ತಿ ಟ್ರಸ್ಟ್ ಗಳಿಗೆ ನೀಡುವ ಅನಾಮಧೇಯ ದೇಣಿಗೆಯ ಮೇಲೆ ತೆರಿಗೆ ವಿನಾಯಿತಿ ಮುಂದುವರಿಸುವುದನ್ನು ಹಾಗೂ ತೆರಿಗೆದಾರರ ಯಾವುದೇ ದಂಡ ಶುಲ್ಕವನ್ನು ಪಾವತಿಸದೆ ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕದ ನಂತರವೂ ಟಿಡಿಎಸ್ ಮರುಪಾವತಿ ಪಡೆಯಲು ಅನುಮತಿ ನೀಡಬೇಕು ಎಂದು ಸಲಹೆ ನೀಡಿತ್ತು. ಸದನ ಮುಂದೂಡಿಕೆ: ಶುಕ್ರವಾರವೂ ಬಿಹಾರದ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದವು. ಈ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಪ್ರಾಯೋಗಿಕ ಯೋಜನೆ ವರ್ಗದಡಿಯಲ್ಲಿ ಯಾವುದೇ ಯೋಜನೆಯನ್ನು ಕೈಗೊಳ್ಳುವುದಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಒದಗಿಸಲು ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸುತ್ತದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಥ್ ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯ ಅಡಿಯಲ್ಲಿ ಡಿಆರ್ಡಿಒ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್) ಯೋಜನೆ ಮೂಲಕ ಹಲವು ಸ್ಟಾರ್ಟ್ಅಪ್, ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡುತ್ತಿದೆ. ಈ ಯೋಜನೆಯಲ್ಲಿ ವಿವಿಧ ಕೈಗಾರಿಕೆಗಳಿಗೆ 343.90 ಕೋಟಿ ರೂ. ವೆಚ್ಚದ 81 ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಇಲ್ಲಿಯವರೆಗೆ 30 ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕರ್ನಾಟಕದ ರೈತರಿಗೆ 2020ರ ಏಪ್ರಿಲ್ನಿಂದ 15,127.88 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ನಿಂದ- ಜೂನ್ವರೆಗಿನ 20ನೇ ಕಂತಿನಲ್ಲಿ 43,29,135 ರೈತರಿಗೆ 877.32 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ರಮಾನಾಥ್ ಠಾಕೂರ್ ತಿಳಿಸಿದ್ದಾರೆ. 932.9 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ: ದೇಶದಾದ್ಯಂತ ಖಾರಿಫ್ ಬೆಳೆಗಳ ಬಿತ್ತನೆ ಸಾಮಾನ್ಯವಾಗಿದ್ದು, ಇದುವರೆಗೆ ಒಟ್ಟು 932.93 ಲಕ್ಷ ಹೆಕ್ಟೇರ್ ನಲ್ಲಿ ಆಹಾರ ಧಾನ್ಯಗಳು, ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳ ಬಿತ್ತನೆ ನಡೆದಿದೆ.