ಲಾಕ್​ಡೌನ್ ನಡುವೆಯೂ ಹೊಸ ಕೆಲಸ ಗಿಟ್ಟಿಸಿಕೊಂಡ ಅದೃಷ್ಟಶಾಲಿಗಳಿವರು...!

epfo
Published on

ನವದೆಹಲಿ: ಕರೊನಾ ಸಂಕಷ್ಟದಿಂದಾಗಿ ದೇಶದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ ಎನ್ನುವುದು ನಿಜ. ಆದರೆ, ಇದೇ ಅವಧಿಯಲ್ಲಿ ಲಕ್ಷಾಂತರ ಜನರು ಹೊಸದಾಗಿ ಉದ್ಯೋಗ ಪಡೆದುಕೊಂಡಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ನೀಡಿರುವ ಅಂಕಿ-ಸಂಖ್ಯೆಗಳನ್ನು ಗಮನಿಸಿದಲ್ಲಿ ಮೊದಲ ತ್ರೈಮಾಸಿಕದಲ್ಲಿ ಹೊಸದಾಗಿ ಪಿಎಫ್​ ಖಾತೆ ತೆರೆದವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

ಕೇಂದ್ರ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ವಿವರಗಳನ್ನು ಗಮನಿಸುವುದಾದರೆ, ಪ್ರಸಕ್ತ ಶೈಕ್ಷಣಿಕ ವರ್ಷದ ಏಪ್ರಿಲ್​- ಜೂನ್​ ತ್ರೈಮಾಸಿಕದಲ್ಲಿ ಭವಿಷ್ಯ ನಿಧಿ ಸಂಸ್ಥೆಗೆ 8.4 ಲಕ್ಷ ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅಂದರೆ ಅಷ್ಟು ಜನರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದೇ ಅರ್ಥ.

ಅದರಲ್ಲೂ ಏಪ್ರಿಲ್​ನಲ್ಲಿ 0.20 ಲಕ್ಷ ಹಾಗೂ ಮೇ ತಿಂಗಳಲ್ಲಿ 1.72 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಆದರೆ, ಜೂನ್​ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇದೊಂದೇ ತಿಂಗಳಲ್ಲಿ 6.55 ಲಕ್ಷ ಗ್ರಾಹಕರನ್ನು ಹೊಸದಾಗಿ ಸೇರಿಸಿಕೊಂಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದಲ್ಲಿ ಶೇ.280 ಹೆಚ್ಚಳವಾದಂತಾಗಿದೆ.

ಸದಸ್ಯರ ಪ್ರಮಾಣ ಹೆಚ್ಚಾಗಿರುವುದು, ಹೊಸ ಸದಸ್ಯರ ಸೇರ್ಪಡೆ, ಸದಸ್ಯರ ನಿರ್ಗಮನ ಪ್ರಮಾಣ ಇಳಿಕೆಯಾಗಿರುವುದು ಸಹಜವಾಗಿಯೇ ಸಂತಸಕ್ಕೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿದೆ. ಲಾಕ್​ಡೌನ್​ ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ವಿರುದ್ಧವಾದ ಬೆಳವಣಿಗೆಯಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net