

ನವದೆಹಲಿ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸಂಪೂರ್ಣ ಬಿಗಡಾಯಿಸಿದ್ದು, ಕೋಮಾದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಿಮ್ ಕತೆ ಮುಗಿದಿದೆ, ಈಗೇನಿದ್ದರೂ ಆತನ ಸಹೋದರಿ ಅಧಿಕಾರ ಸ್ವೀಕರಿಸುವುದೊಂದೇ ಬಾಕಿ ಎಂದು ಹೇಳಲಾಗುತ್ತಿದೆ.
ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್ ಡೆ-ಜಂಗ್ ಆಪ್ತರೊಬ್ಬರು ಹೇಳುವ ಪ್ರಕಾರ, ಈ ಹಿಂದೆಯೂ ಕಿಮ್ ಸಾವಿನ ಸುದ್ದಿಗಳು ಹರಿದಾಡಿದ್ದವು. ಆದರೆ, ಇದಾದ ಕೆಲ ದಿನಗಳಲ್ಲಿಯೇ ಕಿಮ್ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಕಿಮ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕಿಮ್ ಜೀವಂತಿಕೆಗೆ ಸಾಕ್ಷ್ಯವೆಂಬಂತೆ ಆಗಲೂ ಕೆಲ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಇದೀಗ ಮತ್ತೆ ಅನಾರೋಗ್ಯದಿಂದ ಬಳಲುತ್ತಿದ್ದ ಕಿಮ್ ಕೋಮಾಗೆ ಜಾರಿದ್ದಾರೆ. ಈ ಕಾರಣಕ್ಕೆ ಅಧಿಕಾರವನ್ನೆಲ್ಲ ಸಹೋದರಿ ಕಿಮ್ ಯೊ ಜಂಗ್ಗೆ ಹಸ್ತಾಂತರಿಸಿದ್ದಾರೆ. ಬಹುತೇಕ ಎಲ್ಲ ನಿರ್ಧಾರಗಳನ್ನು ಆಕೆಯೇ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಉತ್ತರ ಕೊರಿಯಾದ ಆಡಳಿತದಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಕಿಮ್ ಜಾಂಗ್ ಇಲ್ ಮೃತಪಟ್ಟಾಗ ಹಲವು ತಿಂಗಳ ಬಳಿಕ ಸಾವಿನ ಮಾಹಿತಿಯನ್ನು ನೀಡಲಾಗಿತ್ತು. ಸದ್ಯ ಆತನ ಸಹೋದರಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಉತ್ತರ ಕೊರಿಯಾಗೆ ಭೇಟಿ ನೀಡಿದ್ದ ಪತ್ರಕರ್ತ ರಾಯ್ ಕೆಲ್ಲಿ ಎಂಬುವರು ಹೇಳಿದ್ದಾರೆ.
ಕಾರ್ಯಭಾರದ ಒತ್ತಡ ನಿಭಾಯಿಸಲಾಗದೇ, ಕಿಮ್ ಕೆಲ ಅಧಿಕಾರಗಳನ್ನು ಆಯ್ದ ಕೆಲವರಿಗೆ ಹಂಚಿಕೆ ಮಾಡಿದ್ದರು. ಅದರಲ್ಲಿ ಸಹೋದರಿ ಕಿಮ್ ಯೊ ಜಂಗ್ ಕೂಡ ಸೇರಿದ್ದಾಳೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಆತನ ಸಾವು ಹಾಗೂ ಸಹೋದರಿ ಅಧಿಕಾರಕ್ಕೆ ಬರುತ್ತಾಳೆ ಎನ್ನುವುದು ಕೂಡ ವದಂತಿಯೇ ಆಗಿದೆ ಎನ್ನುವುದು ಗುಪ್ತಚರ ವಿಭಾಗದ ಕೆಲವರ ಅಭಿಪ್ರಾಯವಾಗಿದೆ.