ನವದೆಹಲಿ: 27 ವರ್ಷಗಳ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರ ರಾಜಧಾನಿಯಲ್ಲಿ( New Delhi) ಮತ್ತೆ ಅಧಿಕಾರಕ್ಕೆ ಬಂದಿದೆ. ಆದರೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಿಜೆಪಿ ಅಭ್ಯರ್ಥಿಯು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ವಾಸಿಸುತ್ತಿದ್ದ ಸಿವಿಲ್ ಲೈನ್ಸ್‌ನಲ್ಲಿರುವ ಫ್ಲ್ಯಾಗ್‌ಸ್ಟಾಫ್ ರಸ್ತೆಯ ಬಂಗಲೆಯ ‘ಶೀಶ್ ಮಹಲ್’ ಅನ್ನು ವಾಸಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಪ್ರದರ್ಶನ ನೀಡಿದೆ. 70 ಸದಸ್ಯರ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದಿದೆ. 2020ರಲ್ಲಿ ಗೆದಿದ್ದ ಎಂಟು ಸ್ಥಾನಗಳಿಗಿಂತ 40 ಹೆಚ್ಚು ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. 2020ರಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಎಎಪಿ ಈ ಬಾರಿ 22ಕ್ಕೆ ಇಳಿದಿದೆ. ಆದರೆ ಕಾಂಗ್ರೆಸ್ ಸತತ ಮೂರನೇ ಬಾರಿಗೂ ತನ್ನ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ದೆಹಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿರ್ಮಿಸಿದ ‘ಶೀಶ್ ಮಹಲ್’ ಚರ್ಚೆಯ ವಿಷಯವಾಗಿತ್ತು. ‘ಶೀಶ್ ಮಹಲ್’ ನಿರ್ಮಾಣದಲ್ಲಿ ಎಎಪಿ ದೊಡ್ಡ ಹಗರಣ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು
ಈಗ ದೆಹಲಿಯಲ್ಲಿ ಎಎಪಿ ಅಧಿಕಾರದಿಂದ ಹೊರಗುಳಿದಿರುವುದರಿಂದ, ಹೊಸ ಬಿಜೆಪಿ ಸಿಎಂ ನಿವಾಸ ಶೀಶ್‌ಮಹಲ್ ಆಗಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉಳಿದಿದೆ. ದೆಹಲಿಯ ನೂತನ ಮುಖ್ಯಮಂತ್ರಿ ಸಿವಿಲ್ ಲೈನ್ಸ್‌ನ ಫ್ಲ್ಯಾಗ್‌ಸ್ಟಾಫ್ ರಸ್ತೆಯಲ್ಲಿರುವ ‘ಶೀಶ್ ಮಹಲ್’ ಬಂಗಲೆಯಲ್ಲಿ ವಾಸಿಸುವುದಿಲ್ಲ. ಈ ಹಿಂದೆ ಬಿಜೆಪಿ ಮುಖ್ಯಮಂತ್ರಿ ನಿವಾಸಕ್ಕಾಗಿ ಎಎಪಿ ಸರ್ಕಾರ ನಿರ್ಮಿಸಿದ ಐಷಾರಾಮಿ ಮನೆಯೆ ಶೀಶ್ ಮಹಲ್ ಎಂದು ಹೇಳಿತ್ತು.
ದೆಹಲಿಯಲ್ಲಿರುವ ಶೀಶ್ ಮಹಲ್ ಅನ್ನು ಪ್ರವಾಸೋದ್ಯಮಕ್ಕಾಗಿ ಸಾರ್ವಜನಿಕರಿಗೆ ತೆರೆಯಬೇಕು ಎಂದು ಹಿರಿಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಕಾರಣದಿಂದಾಗಿ, ಬಿಜೆಪಿ ಸರ್ಕಾರವು ಶೀಶ್‌ಮಹಲ್ ಅನ್ನು ಸಾರ್ವಜನಿಕರಿಗೆ ತೆರೆಯಲು ನಿರ್ಧರಿಸಬಹುದು ಎಂದು ಊಹಿಸಲಾಗುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಬಿಜೆಪಿ ನಾಯಕತ್ವವು ಇನ್ನೂ ಮುಖ್ಯಮಂತ್ರಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಹೊಸದಾಗಿ ಆಯ್ಕೆಯಾದ ಶಾಸಕ ಪ್ರವೇಶ್ ವರ್ಮಾ ಅವರನ್ನು ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. 47 ವರ್ಷದ ಪ್ರವೇಶ್ ವರ್ಮಾ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಸ್ಥಾನದಿಂದ ಕೇಜ್ರಿವಾಲ್ ಅವರನ್ನು 4,000ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ರವೇಶ್ ವರ್ಮಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ದಿವಂಗತ ಸಾಹಿಬ್ ಸಿಂಗ್ ವರ್ಮಾ ಅವರ ಮಗ. ಪಶ್ಚಿಮ ದೆಹಲಿಯಿಂದ ಎರಡು ಬಾರಿ ಸಂಸದರಾಗಿರುವ ಪ್ರವೇಶ್ ವರ್ಮಾ ಅವರಿಗೆ ಕಳೆದ ವರ್ಷ ನಡೆದ ಸಂಸತ್ ಚುನಾವಣೆಗೆ ಟಿಕೆಟ್ ನೀಡಲಾಗಿಲ್ಲ. 2025ರ ದೆಹಲಿ ಚುನಾವಣೆಯಲ್ಲಿ, ಪರ್ವೇಶ್ ವರ್ಮಾ ಅವರು ನವದೆಹಲಿ ವಿಧಾನಸಭಾ ಸ್ಥಾನದಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದರು. ಈ ಸ್ಥಾನವನ್ನು ಎಎಪಿ ಮುಖ್ಯಸ್ಥರು ಸತತವಾಗಿ ಮೂರು ಬಾರಿ ಗೆದ್ದಿದ್ದರು.
ಚುನಾವಣೆಯಲ್ಲಿ ಗೆದ್ದು 27 ವರ್ಷಗಳ ನಂತರ ಬಿಜೆಪಿಯ ಪುನರಾಗಮನದ ನಂತರ ಮಾತನಾಡಿದ ಅವರು, ದೆಹಲಿಯ ಮುಂದಿನ ಮುಖ್ಯಮಂತ್ರಿಯನ್ನು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಹೇಳಿದರು. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಈ ವಾರ ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ದೆಹಲಿಯ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಫೆಬ್ರವರಿ 12 ಮತ್ತು 13ರಂದು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಾಷಿಂಗ್ಟನ್ ಪ್ರವಾಸವಾಗಿದೆ.(ಏಜೆನ್ಸೀಸ್)