

ದೊಡ್ಡಬಳ್ಳಾಪುರ: ಕಳೆದ ಏಳು ತಿಂಗಳ ಹಿಂದಷ್ಟೇ ಮನೆಯವರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದ ಗಂಡ ಹೆಂಡತಿ ಮಧ್ಯೆ ಜಗಳವಾಗಿದ್ದು ಪತ್ನಿ ಹತ್ಯೆ ಯಾಗಿದ್ದಾರೆ.
ಮಂಗಳವಾರ ತಡರಾತ್ರಿ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ಹೋಗಿದೆ. ಈ ವೇಳೆ ಪತಿಯೇ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ಶ್ರೀನಗರದ ಖಾಸಗಿ ಶಾಲೆ ಬಳಿ ನಡೆದಿದೆ.
ಮೃತ ಮಹಿಳೆಯನ್ನು ತಮಿಳುನಾಡಿನ ಕನ್ಯಾಕುಮಾರಿ ಮೂಲದ ಜನಿಲಾ ಜೋಬಿಯಾ (22ವರ್ಷ) ಎಂದು ಗುರುತಿಸಲಾಗಿದ್ದು, ಏಳು ತಿಂಗಳ ಹಿಂದೆಯಷ್ಟೇ ಶ್ರೀನಗರದ ಸ್ಯಾಮ್ ನೊಂದಿಗೆ ಮದುವೆಯಾಗಿತ್ತು. ಮಂಗಳವಾರ ರಾತ್ರಿ ಗಂಡ-ಹೆಂಡತಿ ನಡುವೆ ನಡೆದ ಜಗಳದಲ್ಲಿ ಪತಿ ಸ್ಯಾಮ್ ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸುತ್ತಿದ್ದುದ್ದನ್ನು ಕಂಡು ಸೊಸೆಯ ರಕ್ಷಿಸಲು ತೆರಳಿದ ತಂದೆ-ತಾಯಿ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಡದಿಯನ್ನು ಹಲ್ಲೆ ನಡೆಸಿದ ಸ್ಯಾಮ್‌ನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಜನಿಲಾ ಜೋಬಿಯಾ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ, ಡಿವೈಎಸ್ಪಿ ನಾಗರಾಜ್, ಇನ್ಸ್‌ಕ್ಟರ್‌ಗಳಾದ ಪ್ರೀತಂ ಶ್ರೇಯಕರ, ಹರೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸ್ಯಾಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.