

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL) ಅಧಿಕಾರಿಗಳೊಡನೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಈ ವರ್ಷದ ನವೆಂಬರ್ ವೇಳೆಗೆ 4 ಹೊಸ ಮೆಟ್ರೋ ಲೈನ್ ಉದ್ಘಾಟಿಸಲಾಗುವುದು ಎಂದು ಹೇಳಿದ್ದಾರೆ.
ಬಿಎಂಆರ್ಸಿಎಲ್ ಅಧಿಕಾರಿಗಳೊಡನೆ ಸಭೆ ನಡೆಸಿದ ಡಿಸಿಎಂ, "ಒಟ್ಟು 6 ಹೊಸ ಮೆಟ್ರೋ ಲೈನ್ ತರಲು ಚಿಂತಿಸಿದ್ದೇವೆ. 6ರ ಪೈಕಿ 4 ಹೊಸ ಮೆಟ್ರೋ ಲೈನ್ಗಳು ಈ ವರ್ಷದ ನವೆಂಬರ್ ತಿಂಗಳೊಳಗೆ ಸಿದ್ಧವಾಗಲಿದೆ" ಎಂದು ಹೇಳಿದರು. “ನಾನು ನಮ್ಮ ಮೆಟ್ರೋದಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದೇನೆ ಮತ್ತು ಇದು ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಒದಗಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ರಾತ್ರಿ 11 ಗಂಟೆಯ ನಂತರವೂ ಸೇವೆಯನ್ನು ವಿಸ್ತರಿಸಲು ಸಲಹೆಗಳು ಕೇಳಿಬಂದಿದ್ದು, ಅದನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಜಾಹೀರಾತಿನಿಂದಲೂ ಸಾಕಷ್ಟು ಲಾಭ ಬರುತ್ತಿದೆ" ಎಂದು ಹೇಳಿದರು.
"ರಿಯಾಯತಿ ದರದಲ್ಲಿ ವಿದ್ಯುತ್ ಲಭ್ಯವಿದ್ದರೂ ಗ್ರೂಪ್ ಕ್ಯಾಪ್ಟಿವ್ ಮಾದರಿ ಅನುಸರಿಸಿ ವಿದ್ಯುತ್ ವೆಚ್ಚ ತಗ್ಗಿಸುವಂತೆ ಸೂಚಿಸಿದ್ದೇನೆ. ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ನಿರ್ಮಾಣದ ವೇಗವನ್ನು ಹೆಚ್ಚಿಸುವ ಅವಶ್ಯಕತೆಯಿದೆ. 2026ರ ವೇಳೆಗೆ ಆರು ಹೊಸ ಮೆಟ್ರೊ ಮಾರ್ಗಗಳನ್ನು(New Metro Lines) ಉದ್ಘಾಟಿಸಲಾಗುವುದು, ಈ ಪೈಕಿ ನಾಲ್ಕು ಈ ವರ್ಷದ ನವೆಂಬರ್ ವೇಳೆಗೆ ಸಿದ್ಧವಾಗಲಿದೆ" ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.