ಚಂದ್ರಯಾನ-3 ಯಶಸ್ಸು: 'ಆದಿಪುರುಷ' ಚಿತ್ರಕ್ಕೆ ಬಳಸಿದ 700 ಕೋಟಿ ರೂ. ಬಜೆಟ್​ ಅನ್ನು ನಮ್ಮ ವಿಜ್ಞಾನಿಗಳಿಗೆ ಕೊಡಬಹುದಿತ್ತು; ಟ್ರೋಲ್​ ಮಾಡಿದ ನೆಟ್ಟಿಗರು

Untitled design (60)
Published on

ಆಂಧ್ರಪ್ರದೇಶ: ಟಾಲಿವುಡ್​ ನಟ ಪ್ರಭಾಸ್‌ ಅಭಿನಯಿಸಿದ 'ಆದಿಪುರುಷ' ಚಿತ್ರವು ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಭಾರೀ ಹಿನ್ನಡೆಯನ್ನು ಅನುಭವಿಸಿತು. ಚಿತ್ರದ ವಿಎಫ್‌ಎಕ್ಸ್, ಡೈಲಾಗ್‌ಗಳು, ಬಜೆಟ್ ಸೇರಿದಂತೆ ಹಲವು ವಿಚಾರಗಳಿಗೆ ಸಿನಿಮಾ ವ್ಯಾಪಕ ವಿರೋಧಗಳು ಮತ್ತು ಟ್ರೋಲ್‌ಗಳನ್ನು ಎದುರಿಸಿತ್ತು. ಆದ್ರೆ, ಇದೀಗ ಮತ್ತೊಮ್ಮೆ ಈ ಚಿತ್ರ ಟ್ರೋಲ್​ಗೆ ಗುರಿಯಾಗಿದೆ.

ಬುಧವಾರ (ಆಗಸ್ಟ್​ 23) ಭಾರತದ ಇಸ್ರೋ ಸಂಸ್ಥೆಯು ಚಂದ್ರಯಾನ-3 ಮಿಷನ್​ನ ವಿಕ್ರಮ್​ ಲ್ಯಾಂಡಂರ್​ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್​ ಲ್ಯಾಂಡಿಂಗ್​ ಮಾಡಿತು. ಈ ಒಂದು ಸಂಗತಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು, ಪ್ರತಿಯೊಬ್ಬ ಭಾರತೀಯನಿಗೂ ಇದೊಂದು ಹೆಮ್ಮೆಯ ಕ್ಷಣವಾಗಿದೆ. ಸದ್ಯ ಈ ವಿಚಾರವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಖೇನ ಕೊಂಡಾಡಿದ್ದಾರೆ ಮತ್ತು ಇಸ್ರೋ ಸೈಟಿಂಸ್ಟ್​ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಮಧ್ಯೆ ಇಸ್ರೋ ಚಂದ್ರಯಾನ-3ರ ಮಿಷನ್​ ಈಡೇರಿಸಲು 615 ಕೋಟಿ ರೂ. ಅನ್ನು ಬಳಕೆ ಮಾಡಿತು. ಆದ್ರೆ, ಪ್ರಭಾಸ್​ ಅಭಿನಯದ ಆದಿಪುರುಷ್​ ಚಿತ್ರಕ್ಕೆ ಬರೋಬ್ಬರಿ 700 ಕೋಟಿ ರೂ. ಬಂಡವಾಳ ಹೂಡಲಾಗಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್​ ಚಿತ್ರವನ್ನು ಮತ್ತೊಮ್ಮೆ ಟ್ರೋಲ್​ ಮಾಡುವ ಮುಖೇನ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಂದ್ರಯಾನ 3ರ ಮಿಷನ್ ಈಡೇರಿಸಲು ಬಳಸಿದ ಬಜೆಟ್ ಆದಿಪುರುಷ ಚಿತ್ರಕ್ಕಿಂತ ಕಡಿಮೆಯಿದೆ. ಈ ಚಿತ್ರಕ್ಕೆ ಬಳಸಿದ ಹಣವನ್ನು ನಮ್ಮ ವಿಜ್ಞಾನಿಗಳಿಗೆ ಕೊಡಬಹುದಿತ್ತು ಎಂದು ವ್ಯಾಪಕವಾಗಿ ಟೀಕಿಸಿದ್ದಾರೆ. ಹಲವರು ಚಿತ್ರದ ಫೋಟೋ ಮತ್ತು ಚಂದ್ರಯಾನ 3ರ ಬಜೆಟ್‌ನ ಫೋಟೋ ಜೋಡಿಸಿ ಟ್ರೋಲ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net