

ಅಮರಾವತಿ: ವಾಮಾಚಾರದ ಶಂಕೆಯಿಂದ ಯುವಕನೊಬ್ಬ ತನ್ನ ಚಿಕ್ಕಪ್ಪನ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಹಾರಾಷ್ಟ್ರದ ಅಮರಾವತಿ ಬಳಿ ನಡೆದಿದೆ.
ಅನಿಕೇತ್ ವಿನಾಯಕ ವಾಂಖಡೆ (23) ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಈತನನ್ನು ಬಂಧಿಸಿರುವ ಪೊಲೀಸರಿಗೆ ತನಿಖೆಯ ವೇಳೆ ಅನೇಕ ಆಘಾತಕಾರಿ ಅಂಶಗಳು ತಿಳಿದು ಬಂದಿವೆ.
ಖಲ್ಲಾರ್ ನಿವಾಸಿ ಪಂಡಿತ್ ಪ್ರಲ್ಹಾದರಾವ್ ವಾಂಖಡೆ (51) ಗ್ರಾಮದ ಹೊರವಲಯದಲ್ಲಿ ಹೋಟೆಲ್ನ್ನು ಹೊಂದಿದ್ದು, ತಮ್ಮ ಕುಟುಂಬದೊಂದಿಗೆ ಹೋಟೆಲ್‌ನ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಶನಿವಾರ ಮಧ್ಯರಾತ್ರಿ ಕುಟುಂಬದ ಸದಸ್ಯರೊಂಗದಿಗೆ ಮಲಗಿದ್ದ ವೇಳೆ ಈತನನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು.
ಇದನ್ನೂ ಓದಿ: ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್ಫಾರ್ಮ್ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ..
ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲ ಸುಟ್ಟು ಕರಕಲಾಗಿದ್ದು, 5 ಲಕ್ಷ 70 ಸಾವಿರ ರೂಪಾಯಿ ನಷ್ಟವಾಗಿ ಈತನ ಮಗನಿಗೂ ಗಾಯಗಳಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಪಂಡಿತ್ ವಾಂಖಡೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಅಣ್ಣನ ಮಗನೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅದರಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.
ಕೆಲ ದಿನಗಳ ಹಿಂದೆ ತನ್ನ ತಂದೆಯ ಆರೋಗ್ಯ ಹದಗೆಟ್ಟಿತ್ತು. ಈ ವೇಳೆ ತನ್ನ ಚಿಕ್ಕಪ್ಪ ಮಾಟ ಮಾಡಿಸಿರುವ ಶಂಕೆ ಬಂದಿತ್ತು. ಹಾಗಾಗಿ ತಾನು ಕೋಪದಿಂದ ಚಿಕ್ಕಪ್ಪನ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಯು ತಿಳಿಸಿದ್ದಾನೆ.(ಏಜೆನ್ಸೀಸ್)