ನೇಪಾಳ ಹಿಂಸಾಚಾರ; 2026 ಮಾರ್ಚ್​ 5ರಂದು ನೇಪಾಳ ಸಾರ್ವತ್ರಿಕ ಚುನಾವಣೆ; ಅಧ್ಯಕ್ಷ ರಾಮಚಂದ್ರ ಪೌಡೆಲ್ ಘೋಷಣೆ| Nepal Next Election

Untitled design (16)
Published on

Nepal Next Election: ಜನರಲ್ ಝೆಡ್ ಪ್ರತಿಭಟನೆಗೆ ನೇಪಾಳದಲ್ಲಿ ಕೆ.ಪಿ.ಓಲಿ ನೇತೃತ್ವದ ಸರ್ಕಾರ ಪತನವಾಗಿದೆ. ಮಧ್ಯಂತರ ಸರ್ಕಾರ ರಚನೆಯಾಗಿ, ಸುಪ್ರೀಂಕೋರ್ಟ್​​​ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ  ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪೂರ್ಣಾವಧಿ ಆಡಳಿತಕ್ಕಾಗಿ ಮುಂದಿನ ಸಂಸತ್ ಚುನಾವಣೆ ಮಾರ್ಚ್ 5ರಂದು ನಡೆಯಲಿದೆ ಎಂದು ಅಧ್ಯಕ್ಷ ರಾಮಚಂದ್ರ ಪೌಡೆಲ್ ಘೋಷಿಸಿದ್ದಾರೆ ಎಂದು ಶನಿವಾರ(ಸೆ. 13) ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ಮತ್ತು ಭ್ರಷ್ಟಾಚಾರದ ಆರೋಪದ ವಿರುದ್ಧ ವ್ಯಾಪಕವಾದ ಸರ್ಕಾರಿ ವಿರೋಧಿ ಪ್ರತಿಭಟನೆಗಳ, 19 ಜನರ ಸಾವಿನ ನಂತರ ಈ ವಾರ ಕೆ.ಪಿ.ಓಲಿ ರಾಜೀನಾಮೆ ನೀಡಿದರು. ನಂತರ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ 73 ವರ್ಷದ ಮಾಜಿ ಮುಖ್ಯ ನ್ಯಾಯಮೂರ್ತಿ ಕರ್ಕಿ ನಿನ್ನೆ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಾಳೆ ನೂತನ ಪ್ರಧಾನಿ ಕರ್ಕಿ ಸಚಿವ ಸಂಪುಟವನ್ನು ರಚಿಸಲಿದ್ದು, ಗೃಹ, ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸೇರಿದಂತೆ ಸುಮಾರು ಎರಡು ಡಜನ್ ಖಾತೆಗಳನ್ನು ಸ್ವತಃ ಅವರೇ ನಿರ್ವಹಿಸಲಿದ್ದು, ಅಲ್ಪಸಂಖ್ಯೆ ಸಚಿವರನ್ನು ಸೇರಿಸಿಕೊಂಡು ಆಡಳಿತ ನಡೆಸಲಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ಸಿಂಗ್‌ದರ್ಬಾರ್ ಸಚಿವಾಲಯದಲ್ಲಿರುವ ಪ್ರಧಾನ ಮಂತ್ರಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಸಂಕೀರ್ಣದೊಳಗೆ ಗೃಹ ಸಚಿವಾಲಯಕ್ಕಾಗಿ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ಪ್ರಧಾನ ಮಂತ್ರಿ ಕಚೇರಿಗಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಇಂದು ಪ್ರಧಾನಿ ಕರ್ಕಿ ಕಠ್ಮಂಡುವಿನ ಬನೇಶ್ವರ್ ಪ್ರದೇಶದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಪ್ರತಿಭಟನೆಯ ಸಮಯದಲ್ಲಿ ಗಾಯಗೊಂಡ ನೂರಾರು ಗಾಯಾಳುಗಳನ್ನು ಪರಾಮರ್ಶಿಸಿದ್ದಾರೆ.

ಇದೇ ವೇಳೆ ನೇಪಾಳ ಅಧ್ಯಕ್ಷರು ಹಾಲಿ ಸಂಸತ್ತನ್ನು ವಿಸರ್ಜಿಸಿದ್ದನ್ನು, ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳು, ಸುಪ್ರೀಕೋರ್ಟ್​ನ ವಕೀಲರ ಸಂಘವೂ ತೀವ್ರವಾಗಿ ಟೀಕಿಸಿವೆ. ಈ ಕ್ರಮವನ್ನು ಅಸಂವಿಧಾನಿಕ, ನಿರಂಕುಶ, ಪ್ರಜಾಪ್ರಭುತ್ವಕ್ಕೆ ಆದ ಗಂಭೀರ ಹೊಡೆತ ಎಂದು ಬಣ್ಣಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net