ಹಿಂಸಾತ್ಮಕ ಪ್ರತಿಭಟನೆಗಳಿಗೆ ನಲುಗಿದೆ ನೇಪಾಳ, ಭಾರತೀಯ ಪ್ರಜೆಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದ MEA

Violent Protests
Published on

MEA: ಭಾರತದ ನೆರೆಯ ದೇಶವಾದ ನೇಪಾಳ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಹಿಂಸಾತ್ಮಕ ಪ್ರತಿಭಟನೆಯ ನಂತರ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದು. ಅಲ್ಲದೆ, ಅಶಾಂತಿ ಹೆಚ್ಚುತ್ತಿರುವ ಮಧ್ಯೆ ಭಾರತವು ನೇಪಾಳದಲ್ಲಿರುವ ತನ್ನ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ಮಂಗಳವಾರ (ಸೆಪ್ಟೆಂಬರ್,9) ನೀಡಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯ, ಪರಿಸ್ಥಿತಿ ಸ್ಥಿರವಾಗುವವರೆಗೆ ಭಾರತೀಯ ಪ್ರಜೆಗಳು ನೇಪಾಳ ಪ್ರಯಾಣ ಮುಂದೂಡಬೇಕೆಂದು MEA ತಿಳಿಸಿದೆ. ಈಗಾಗಲೇ ನೇಪಾಳದಲ್ಲಿರುವವರು ಮನೆಯೊಳಗೆ ಇರಿ ಮತ್ತು ಬೀದಿಗಳಲ್ಲಿ ಓಡಾಡುವುದನ್ನು ತಪ್ಪಿಸಿ ಎಂದು ತಿಳಿಸಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಕೋರಲಾಗಿದೆ ಎಂದು ಹೇಳಿದೆ.

ನಿನ್ನೆಯಿಂದ ನೇಪಾಳದಲ್ಲಿನ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅನೇಕ ಯುವ ಜೀವಗಳ ನಷ್ಟದಿಂದ ತೀವ್ರ ದುಃಖಿತರಾಗಿದ್ದೇವೆ. ಮೃತರ ಕುಟುಂಬಗಳೊಂದಿಗೆ ನಮ್ಮ ಪ್ರಾರ್ಥನೆಗಳು ಇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಲ್ಲದೆ, ಆಪ್ತ ಸ್ನೇಹಿತ ಮತ್ತು ನೆರೆಹೊರೆಯವರಾಗಿ, ಸಂಬಂಧಪಟ್ಟವರೆಲ್ಲರೂ ಸಂಯಮದಿಂದ ವರ್ತಿಸುತ್ತಾರೆ. ನೇಪಾಳ ಜನರು ಶಾಂತಿಯುತ ವಿಧಾನಗಳು ಮತ್ತು ಸಂವಾದದ ಮೂಲಕ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ನೇಪಾಳದ ಅಧಿಕಾರಿಗಳು ಕಠ್ಮಂಡು ಮತ್ತು ಇತರ ಹಲವಾರು ನಗರಗಳಲ್ಲಿ ಕರ್ಫ್ಯೂಗಳನ್ನು ಮತ್ತೆ ಹೇರಿದ್ದಾರೆ ಎಂದು MEA ತನ್ನ ಹೇಳಿಕೆಯಲ್ಲಿ ಸೂಚಿಸಿದೆ.

ನೇಪಾಳ ಪ್ರಧಾನಿ ಓಲಿ ರಾಜೀನಾಮೆ

73 ವರ್ಷದ ಪ್ರಧಾನಿ ಓಲಿಯವರು ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಈ ಬಗ್ಗೆ ಮಾತನಾಡಿರುವ ಪೌಡೆಲ್, ಸಮಸ್ಯೆಗೆ ಪರಿಹಾರವನ್ನು ಸುಗಮಗೊಳಿಸಲು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ರಾಜಕೀಯವಾಗಿ ಪರಿಹರಿಸಲು ಸಹಾಯ ಮಾಡಲು ಓಲಿ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳಿದರು. ಓಲಿ​ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಲಾಯಿತು ಎಂದು ಪೌಡೆಲ್ ಅವರ ಸಹಾಯಕರು ದೃಢಪಡಿಸಿದರು, ಹೊಸ ನಾಯಕನನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ ಎಂದು ತಿಳಿಸಿದರು.

ಕಳೆದ ವರ್ಷ ಜುಲೈನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾಲ್ಕನೇ ಅವಧಿಗೆ ಸೇವೆ ಸಲ್ಲಿಸುತ್ತಿರುವ ಓಲಿ, ರಾಜಕೀಯ ಪಕ್ಷಗಳ ಸಭೆ ಕರೆದು ಶಾಂತವಾಗಿರಲು ಕರೆ ನೀಡಿದ್ದರು. ಹಿಂಸಾಚಾರ ರಾಷ್ಟ್ರದ ಹಿತಾಸಕ್ತಿಯಲ್ಲಿಲ್ಲ ಎಂದು ಅವರು ಹೇಳಿದರು. ಅಲ್ಲದೆ, ವಿವಿಧ ಸ್ವಾರ್ಥಿಗಳಿಂದ ಒಳನುಸುಳುವಿಕೆ ಹಾಗೂ ಅಶಾಂತಿಗೆ ಕಾರಣ ಎಂದು ಆರೋಪಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net