ಹಿಲ್ಟನ್​ನಿಂದ ಹಯಾತ್​ ಹೋಟೆಲ್​! 'ಜೆನ್​ಝಿ' ಸಮೂಹ ದಾಳಿಗೆ ₹25 ಬಿಲಿಯನ್​ ನಷ್ಟ: ವರದಿ | Nepal GenZ Protest

ವಿಜಯವಾಣಿ (70)
Published on

Nepal GenZ Protest: ಪ್ರಸ್ತುತ, ನೇಪಾಳವು ಶಾಂತಿಯತ್ತ ತಿರುಗಿದ್ದು, ಜೆನ್​ಝಿ ಪ್ರತಿಭಟನಾಕಾರರ ಆಕ್ರೋಶ ಕೊಂಚ ಇಳಿದಿದೆ. ಕಳೆದ ಐದು ದಿನಗಳಲ್ಲಿ 30ಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿಯಿಟ್ಟರೆ, ಹಣಕಾಸು ಸಚಿವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದರು. ಈಗಾಗಲೇ ಪ್ರಧಾನಿ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಮೂಲಕ ಜೆನ್​ಝಿ ಸೇನೆಯ ತಾಪವನ್ನು ಇಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಕಂಡುಬಂದ ತೀವ್ರ ಪ್ರತಿಭಟನೆ, ನೇಪಾಳವನ್ನು ಅಕ್ಷರಶಃ ನಲುಗುವಂತೆ ಮಾಡಿದೆ. ಜೆನ್​ಝಿ ಆಕ್ರೋಶಕ್ಕೆ ಕೇವಲ ಓಲಿ, ರಾಷ್ಟ್ರಪತಿ ಮತ್ತು ಮಾಜಿ ಪ್ರಧಾನಿಗಳ ನಿವಾಸಗಳು ಮಾತ್ರ ಸುಟ್ಟು ಹೋಗಲಿಲ್ಲ. ಬದಲಿಗೆ ದೇಶದ ಅಪಾರ ಸಂಪತ್ತು ಮತ್ತು ಐಷಾರಾಮಿ ಹೋಟೆಲ್​ಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. ಪಂಚತಾರಾ ಹೋಟೆಲ್‌ಗಳು, ಗಾಜಿನ ಗೋಪುರಗಳು ಮತ್ತು ಲಕ್ಸುರಿ ನಿವಾಸಗಳು ಛಿದ್ರಗೊಂಡಿವೆ.

ಜೆನ್​ಝಿ ಪ್ರತಿಭಟನಾಕಾರರ ದಾಳಿಯಲ್ಲಿ ಹಿಲ್ಟನ್ ಕಠ್ಮಂಡು ಮತ್ತು ಹಯಾತ್ ರೀಜೆನ್ಸಿಗಳು ಸೇರಿವೆ. ಬೆಂಕಿಗೆ ಆಹುತಿಯಾದ ಘಟನೆಗಳಿಂದ ಕನಿಷ್ಠ 34 ಜನರು ಸಾವನ್ನಪ್ಪಿದ್ದು, 1,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಂಸತ್ತು, ಪ್ರಧಾನ ಮಂತ್ರಿ ಕಚೇರಿ ಮತ್ತು ಸುಪ್ರೀಂ ಕೋರ್ಟ್ ಧಗಧಗನೆ ಉರಿಯುತ್ತಿರುವಾಗಲೇ, ಹಿಲ್ಟನ್, ಹಯಾತ್ ರೀಜೆನ್ಸಿ ಮತ್ತು ವರ್ಣಬಸ್ ಮ್ಯೂಸಿಯಂ ಹೋಟೆಲ್ ಸೇರಿದಂತೆ ಪಂಚತಾರಾ ಹೋಟೆಲ್‌ಗಳ ಮೇಲೆಯೂ ಜೆನ್​ಝಿ ಸಮೂಹ ಬೆಂಕಿ ಹಚ್ಚಿ, ದಾಳಿ ನಡೆಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net