

Mass Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟು, ತಮ್ಮ ಎರಡನೇ ಜೀವನವನ್ನು ಸುಖಕರವಾಗಿ ಸಾಗಿಸಲು ನಮ್ಮಿಂದ ಆದಷ್ಟು ಸಹಾಯ ಮಾಡೋಣ ಎಂದು ಮುಂದಾದ ಪಂಚಾಯಿತಿ, ಸಾಮೂಹಿಕ ವಿವಾಹಕ್ಕೆ ಆಹ್ವಾನಿಸಿದ್ದ ಪೋರ್ಟಲ್ ಅನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದಕ್ಕೆ ಕಾರಣ, ಲಭಿಸಿದ ನೀರಸ ಪ್ರತಿಕ್ರಿಯೆ.
'ಪಯ್ಯವೂರ್ ಮಾಂಗಲ್ಯಂ' ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯವೂರ್ ಗ್ರಾಮ ಪಂಚಾಯತಿ, ಊರಿನ ಎಲ್ಲಾ ಜಾತಿ ಮತ್ತು ಧರ್ಮಗಳ ಪುರುಷರು ಮತ್ತು ಮಹಿಳೆಯರನ್ನು ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಳ್ಳಲು ಆಹ್ವಾನಿಸಿತು. ಹೆಚ್ಚುತ್ತಿರುವ ಆರ್ಥಿಕ ಒತ್ತಡ, ಬದಲಾಗುತ್ತಿರುವ ಸಾಮಾಜಿಕ ನಿರೀಕ್ಷೆಗಳು ಮತ್ತು ವೈಯಕ್ತಿಕ ಆದ್ಯತೆಗಳಿಂದಾಗಿ ಮದುವೆಯಾಗುವುದೇ ಕಷ್ಟಸಾಧ್ಯ ಎಂಬ ಭಾವನೆ ಸದ್ಯ ಯುವಜನತೆಯಲ್ಲಿ ಮೂಡಿದೆ.
ಇಂತಹ ಆಲೋಚನೆಗಳನ್ನು ಹೋಗಲಾಡಿಸಲು ಮತ್ತು ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಪಂಚಾಯತಿಯ ಅಧಿಕಾರಿಗಳು, ಆಸಕ್ತ ಯುವಕರು ಮತ್ತು ಯುವತಿಯರು ಅರ್ಜಿ ಸಲ್ಲಿಸಿ ಎಂದು ತಿಳಿಸಿದ್ದರು. ಒಂದೆಡೆ, 3,000ಕ್ಕೂ ಹೆಚ್ಚು ಪುರುಷರು ನೋಂದಾಯಿಸಿಕೊಂಡಿದ್ದು ಅಧಿಕಾರಿಗಳಿಗೆ ಖುಷಿ ತಂದರೆ, ಮತ್ತೊಂದೆಡೆ, ಕೇವಲ 200 ಮಹಿಳೆಯರು ಮಾತ್ರ ರಿಜಿಸ್ಟರ್ ಆಗಿದ್ದಾರೆ. ಈ ಅಸಮತೋಲನ ಕಂಡ ಬೆನ್ನಲ್ಲೇ ಪಂಚಾಯತಿ ಸದ್ಯದ ಮಟ್ಟಿಗೆ ಪುರುಷರಿಂದ ಅರ್ಜಿಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದೆ. ಆದರೆ, ಮಹಿಳೆಯರಿಂದ ಮಾತ್ರ ಅರ್ಜಿಗಳನ್ನು ಪಡೆಯುತ್ತಿದೆ.
"ಹರಿದುಬಂದಿರುವ ಅರ್ಜಿಗಳ ಪೈಕಿ ಒಂದಷ್ಟು ನೆರೆಯ ಜಿಲ್ಲೆಗಳಿಂದ ಬಂದಿವೆ. ಇದು ಆಸಕ್ತಿಯ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ ಎಂಬುದು ಖುಷಿ ಸಂಗತಿ. ಆದಾಗ್ಯೂ, 3,000ಕ್ಕೂ ಹೆಚ್ಚು ಪುರುಷರು ಅರ್ಜಿ ಸಲ್ಲಿಸಲು ಧಾವಿಸಿದರೆ, 200 ಮಹಿಳೆಯರು ಮಾತ್ರ ಮುಂದೆ ಬಂದಿರುವುದು ಬೇಸರದ ಸಂಗತಿ. ಈ ಅಕ್ಟೋಬರ್‌ನಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ" ಎಂದು ಪಂಚಾಯತಿ ಅಧ್ಯಕ್ಷ ಸಾಜು ಕ್ಸೇವಿಯರ್ ತಿಳಿಸಿದ್ದಾರೆ,(ಏಜೆನ್ಸೀಸ್).