

ಕೋಟ: ನೆಂಪು ನರಸಿಂಹ ಭಟ್ಟರು ಶಿಕ್ಷಣ, ಸಾಹಿತ್ಯ, ಸಂಘಟನೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಶಿಶು ಸಾಹಿತ್ಯದಲ್ಲಿ ಅವರ ಸಾಧನೆ ಅನನ್ಯವಾದುದು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನರಸಿಂಹ ಭಟ್ಟರು ಕನ್ನಡ ಅಧ್ಯಾಪಕರಿಗೆ ಮಾದರಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು.
ಇತ್ತೀಚೆಗೆ ನಿಧನರಾದ ನೆಂಪು ನರಸಿಂಹ ಭಟ್ಟರಿಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಮಿತ್ರ ಮಂಡಳಿ ಕೋಟ ಹಾಗೂ ಕೋಟೇಶ್ವರ ಸ್ಥಿತಿ ಗತಿ ತ್ರೈಮಾಸಿಕ ಪತ್ರಿಕೆ ವತಿಯಿಂದ ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸೋಮಶೇಖರ್ ಶೆಟ್ಟಿ, ನೆಂಪು ನರಸಿಂಹ ಭಟ್ ಅವರ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದದಲ್ಲಿನ ಸಾಧನೆ ಬಗ್ಗೆ ಮಾತನಾಡಿದರು. ಹಿರಿಯ ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಮನೋಹರ ಪಿ., ನಾಗೇಶ ಮಯ್ಯ, ಸಾಹಿತಿ ಪರಂಪಳ್ಳಿ ನರಸಿಂಹ ಐತಾಳ, ಲೇಖಕಿ ಜಿ.ಲಕ್ಷ್ಮೀ ಕುಚ್ಚೂರು, ರಾಘವ ಶೆಟ್ಟಿ, ವಿಜಯಲಕ್ಷ್ಮೀ, ಮಾಧುರಿ, ನಾಗರತ್ನಾ ಗಿಳಿಯಾರು ಉಪಸ್ಥಿತರಿದ್ದರು. ಮಹಾಲಕ್ಷ್ಮೀ ಸೋಮಯಾಜಿ ವಂದಿಸಿದರು. ಪ್ರೊ.ಉಪೇಂದ್ರ ಸೋಮಯಾಜಿ ಸ್ವಾಗತಿಸಿ, ನಿರೂಪಿಸಿದರು.