ಕುಂದಾಪುರ: ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಳಾಂತರವನ್ನು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳೀಯ ಜನರ ಮನವಿ ಕಡೆಗಣಿಸಿ ಪುರಸಭೆ ನಿಗದಿತ ಸ್ಥಳದಲ್ಲೇ ಮಾಡಬೇಕು ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವುದು ಜನವಿರೋಧಿಯಾಗಿದೆ ಎಂದು ಹೋರಾಟ ಸಮಿತಿ ಮುಖಂಡ ಸುರೇಶ್ ಕಲ್ಲಾಗರ ಹೇಳಿದರು.

ಹುಂಚಾರಬೆಟ್ಟು ವಾರ್ಡ್‌ನ ಬೆಟ್ಟಾಗರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕುಂದಾಪುರ ಪುರಸಭೆ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಂಚಾಲಕ ರವಿ ವಿ.ಎಂ. ಮಾತನಾಡಿ, ಕೊಳಚೆ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಪುರಸಭಾ ವ್ಯಾಪ್ತಿಯ ಹುಂಚಾರುಬೆಟ್ಟು ವಾರ್ಡ್ ಬೆಟ್ಟಾಗರದ ಜನವಸತಿ ಪ್ರದೇಶ ಗುರುತಿಸಿದ್ದು ಅವೈಜ್ಞಾನಿಕ ಕ್ರಮ. ಇಲ್ಲಿ ಹಲವು ಕುಟುಂಬಗಳು ನೂರಾರು ವರ್ಷಗಳಿಂದ ಬದುಕು ಸಾಗಿಸುತ್ತಿವೆ ಎಂದರು.
ಪುರಸಭೆ ಸದಸ್ಯ ಶೇಖರ್ ಪೂಜಾರಿ, ಸಮಿತಿ ಸಂಚಾಲಕ ಮಹೇಂದ್ರ, ಸಹಸಂಚಾಲಕ ವಿಶ್ವನಾಥ ಗರಡಿ, ಪ್ರಕಾಶ್ ಬೆಟ್ಟಾಗರ, ಸುರೇಶ್ ಮೂಡಹಿತ್ಲು, ಸುಬ್ರಹ್ಮಣ್ಯ ಹೊಳ್ಳ, ಕೃಷ್ಣ ಕಟ್ಕೆರೆ ಕೋಣಿ, ಉದಯ, ಚಂದ್ರಶೇಖರ ವಿ., ಮಂಜುನಾಥ, ಶೇಖರ ದೋಣಿಮನೆ, ರಾಘು ದೋಣಿಮನೆ ಮೊದಲಾದವರು ಇದ್ದರು. ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಮುಖ್ಯಾಧಿಕಾರಿ ಆನಂದ ಜೆ. ಅವರಿಗೆ ಮನವಿ ಸಲ್ಲಿಸಲಾಯಿತು.