ಪ್ರೇಯಸಿಗೆ ಹೊಡೆದ ಯುವಕನಿಗೆ ಕ್ಲಾಸ್​ ತೆಗೆದುಕೊಂಡಿದ್ದ ನೇಹಾ ಧೂಪಿಯಾ ಪತಿಗಿದ್ದಾರಂತೆ ಐವರು ಗರ್ಲ್​ಫ್ರೆಂಡ್ಸ್

neha
Published on

​ಮುಂಬೈ: ರೋಡೀಸ್​ ರಿಯಾಲಿಟಿ ಶೋನ ಗ್ಯಾಂಗ್​ ಲೀಡರ್​ ನೇಹಾ ಧೂಪಿಯಾ ಇತ್ತೀಚೆಗೆ ಟ್ರೋಲಿಗರ ಕೈಗೆ ಸಿಕ್ಕಿಬಿದ್ದಿದ್ದರು. ಶೋನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ತನ್ನೊಂದಿಗೆ ನಾಲ್ವರು ಹುಡುಗರಿಗೆ ಮೋಸ ಮಾಡುತ್ತಿದ್ದರಿಂದ ಆಕೆಗೆ ಹೊಡೆದೆ ಎಂದಿದ್ದಕ್ಕೆ ಆತನಿಗೆ ಕ್ಲಾಸ್​ ತೆಗೆದುಕೊಂಡಿದ್ದ ನೇಹಾಳಿಗೆ ಇದೇನಾ ನಿಮ್ಮ ಲಿಂಗ ಸಮಾನತೆ ಎಂದು ನೆಟ್ಟಿಗರು ಮತ್ತು ಟ್ರೋಲಿಗರು ಪ್ರಶ್ನಿಸಲಾರಂಭಿಸಿದ್ದರು. ಇದೀಗ ಆಕೆಯ ಪತಿ, ಬಾಲಿವುಡ್​ ನಟ ಅಂಗದ್​ ಬೇಡಿ ತನಗೆ ಐದು ಗರ್ಲ್​ಫ್ರೆಂಡ್ಸ್​ ಇರುವ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ.

ಅಂಗದ್​ ಬೇಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅವರಿಗಿರುವ ಐವರು ಗರ್ಲ್​ಫ್ರೆಂಡ್​ಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತ್ನಿ ನೇಹಾ ಜತೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಉಡುಗೆಗಳೊಂದಿಗೆ ತೆಗೆಸಿಕೊಂಡಿರುವ ಐದು ಫೋಟೋಗಳನ್ನು ಹಾಕಿದ್ದು ಇವರು ನನ್ನ ಐದು ಜನ ಗರ್ಲ್​ಫ್ರೆಂಡ್​ಗಳು ಎಂದು ಹೇಳಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತಾನು ತನ್ನ ಪತ್ನಿಯ ಬೆಂಬಲಕ್ಕಿರುವುದಾಗಿ ಅವರು ತಿಳಿಸಿದ್ದಾರೆ.

ರೋಡೀಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬ ತಾನು ತನ್ನ ಪ್ರೇಯಸಿಗೆ ಹೊಡೆದಿರುವುದಾಗಿ ತಿಳಿಸಿದ್ದ. ಆಕೆ ಒಟ್ಟು ಐವರು ಹುಡುಗರಿಗೆ ಒಂದೇ ಸಮಯದಲ್ಲಿ ಮೋಸ ಮಾಡುತ್ತಿದ್ದರಿಂದಾಗಿ ನಾನು ಆಕೆಗೆ ಹೊಡೆದೆ ಎಂದು ಕಾರಣವನ್ನು ಕೊಟ್ಟಿದ್ದ. ಅದಕ್ಕೆ ಸಿಟ್ಟಿಗೆದ್ದ ನೇಹಾ, ಅವಳು ಏನೇ ಮಾಡಿದರೂ ನಿನಗೆ ಹೊಡೆಯುವ ಹಕ್ಕಿಲ್ಲ. ಅವಳು ನಿನ್ನ ಬಿಟ್ಟು ಬೇರೆಯವರನ್ನೂ ಪ್ರೀತಿಸುತ್ತಿದ್ದಾಳೆ ಎಂದರೆ ಅವಳಿಗೆ ನಿನ್ನಲ್ಲಿ ನಿಜವಾದ ಪ್ರೀತಿ ಸಿಕ್ಕಿಲ್ಲ ಎಂದರ್ಥ ಎಂದು ಬೈದಿದ್ದರು. ಇದು ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ನೆಟ್ಟಿಗರು ನೇಹಾ ವಿರುದ್ಧ ತಿರುಗಿ ಬಿದ್ದಿದ್ದರು. ರೋಡೀಸ್​ನಲ್ಲಿ ಹೆಣ್ಣಿಗೊಂದು ನ್ಯಾಯ ಗಂಡಿಗೊಂದು ನ್ಯಾಯ ಎಂದು ಹೇಳಲಾರಂಭಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನೇಹಾ ತಾನು ಹೆಣ್ಣಿನ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರೋಧಿಯಾಗಿದ್ದು, ಹೆಣ್ಣು ಅಥವಾ ಗಂಡು ಯಾರಾದರೂ ದೈಹಿಕ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬರ್ಥದಲ್ಲಿ ನಾನು ಮಾತನಾಡಿದ್ದು ಎಂದು ತಿಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net