ನೀಟ್ ವಿವಾದದ ನಡುವೆ ಶಿಕ್ಷಣ ಇಲಾಖೆಯಿಂದ ಉನ್ನತ ಮಟ್ಟದ ಸಮಿತಿ ರಚನೆ; ಈ ಕಮಿಟಿ ಕಾರ್ಯ ಏನು ಗೊತ್ತಾ?

Untitled-design-2024-06-22T160843.080
Published on

ನವದೆಹಲಿ: ನೀಟ್ ಪೇಪರ್ ಸೋರಿಕೆ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಗಳ ಪಾರದರ್ಶಕ, ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ತಜ್ಞರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸಮಿತಿಯು ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನಗಳನ್ನು ಸುಧಾರಿಸಲು, ಡೇಟಾ ಭದ್ರತಾ ಪ್ರೋಟೋಕಾಲ್‌ಗಳನ್ನು ಸುಧಾರಿಸಲು ಮತ್ತು ಎನ್​ಟಿಎಯ ರಚನೆ ಮತ್ತು ಕಾರ್ಯನಿರ್ವಹಣೆಯ ಕುರಿತು ಶಿಫಾರಸುಗಳನ್ನು ಮಾಡುತ್ತದೆ. ಸಮಿತಿಯು ತನ್ನ ವರದಿಯನ್ನು 2 ತಿಂಗಳೊಳಗೆ ಸಚಿವಾಲಯಕ್ಕೆ ಸಲ್ಲಿಸಲಿದೆ.

ಶಿಕ್ಷಣ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷತೆಯನ್ನು ಇಸ್ರೋದ ಮಾಜಿ ಅಧ್ಯಕ್ಷರು ಮತ್ತು ಐಐಟಿ ಕಾನ್ಪುರದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ವಹಿಸಲಿದ್ದಾರೆ. ಇವರೊಂದಿಗೆ ಆರು ಮಂದಿ ಸದಸ್ಯರನ್ನೂ ಸಮಿತಿಯಲ್ಲಿ ಸೇರಿಸಲಾಗಿದೆ. ಅವರಲ್ಲಿ ದೆಹಲಿಯ ಏಮ್ಸ್‌ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಹೆಸರೂ ಸೇರಿದೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರಾಧ್ಯಾಪಕ ಬಿ.ಜೆ. ರಾವ್ ಅವರಿಗೂ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ.

ಐಐಟಿ ಮದ್ರಾಸ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಮಮೂರ್ತಿ ಕೂಡ ಸಮಿತಿಯ ಸದಸ್ಯರಾಗಿದ್ದಾರೆ. ಪಂಕಜ್ ಬನ್ಸಾಲ್, ಸಹ-ಸಂಸ್ಥಾಪಕ, ಪೀಪಲ್ ಸ್ಟ್ರಾಂಗ್ ಮತ್ತು ಮಂಡಳಿಯ ಸದಸ್ಯ - ಕರ್ಮಯೋಗಿ ಭಾರತ್ ಅವರನ್ನೂ ಈ ಸಮಿತಿಯಲ್ಲಿ ಸೇರಿಸಲಾಗಿದೆ. ಈ ಸಮಿತಿಯಲ್ಲಿ ಆದಿತ್ಯ ಮಿತ್ತಲ್, ವಿದ್ಯಾರ್ಥಿ ವ್ಯವಹಾರಗಳ ಡೀನ್, ಐಐಟಿ ದೆಹಲಿ ಕೂಡ ಇದ್ದಾರೆ. ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಸೇರಿಸಲಾಗಿದೆ.

ನೀಟ್-ಯುಜಿ, ಯುಜಿಸಿ ನೆಟ್ ಸೇರಿದಂತೆ ಹಲವು ಪರೀಕ್ಷೆಗಳ ಪೇಪರ್ ಸೋರಿಕೆ ವಿವಾದ ಒಂದು ವಾರಕ್ಕೂ ಹೆಚ್ಚು ಕಾಲ ನಡೆಯುತ್ತಿರುವಾಗಲೇ ಈ ಹೆಜ್ಜೆ ಇಡಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net