

ನವದೆಹಲಿ: ನೀಟ್ - ಯುಜಿ ಪರೀಕ್ಷೆ 2024ರ ಫಲಿತಾಂಶಗಳನ್ನು ಜುಲೈ 20 ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ತನ್ನ ವೆಬೆಸೈಟ್ನಲ್ಲಿ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಗೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.
ಅದೇ ವೇಳೆ ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೆ, ನಗರವಾರು, ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಹೇಳಿದ್ದು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಜುಲೈ 24 ರಂದು ಪದವಿಪೂರ್ವ ವೈದ್ಯಕೀಯ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಎನ್ಟಿಎ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ವಿರುದ್ಧ ಸಲ್ಲಿಕೆಯಾಗಿರುವ 40ಕ್ಕೂ ಹೆಚ್ಚು ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರನೆ ನಡೆಸಿತು. ಮೇ 5 ರಂದು ಸಾಗರೋತ್ತರ 14 ನಗರಗಳು ಸೇರಿದಂತೆ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ 23.33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.