

Suicide: ನಾನು ವೈದ್ಯನಾಗಲು ಬಯಸಲ್ಲ ಎಂದು ನೀಟ್ ರ‍್ಯಾಂಕ್ ವಿದ್ಯಾರ್ಥಿಯೊಬ್ಬ, ಮೆಡಿಕಲ್ ಕಾಲೇಜು ಪ್ರವೇಶಕ್ಕಾಗಿ ಹೊರಡಬೇಕಿದ್ದ ದಿನವೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಬುಧವಾರ (ಸೆ.24) ವರದಿಯಾಗಿದೆ.
ವಿದ್ಯಾರ್ಥಿಯನ್ನು ಅನುರಾಗ್ ಅನಿಲ್ ಬೋರ್ಕರ್(19) ಎಂದು ಗುರುತಿಸಲಾಗಿದೆ. ಸಿಂದೇವಾಹಿ ತಾಲ್ಲೂಕಿನ ನವರಗಾಂವ್ ನಿವಾಸಿಯಾದ ಅನುರಾಗ್ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದನು. ಇತ್ತೀಚೆಗೆ ನೀಟ್ ಯುಜಿ 2025 ಪರೀಕ್ಷೆಯಲ್ಲಿ 99.99 ಶೇಕಡಾವಾರು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದನು. ಮತ್ತು ಒಬಿಸಿ ವಿಭಾಗದಲ್ಲಿ 1475 ರ ಅಖಿಲ ಭಾರತ ರ‍್ಯಾಂಕ್ ಗಳಿಸಿದ್ದ. ಇದರಿಂದ ಗೋರಖ್ಪುರದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಲಭಿಸಿತ್ತು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಗಳು, ಅನುರಾಗ್ ಗೋರಖ್‌ಪುರಕ್ಕೆ ತೆರಳುವ ಮುನ್ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಿಂದ ಡೆತ್ನೋಟ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ವೈದ್ಯನಾಗಲು ಬಯಸುವುದಿಲ್ಲ ಎಂದು ಬರೆದಿದ್ದ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)