

ಪುತ್ತೂರು ಗ್ರಾಮಾಂತರ: ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸುವ ಜತೆಗೆ ರೋಗಗಳು ಬಾರದಂತೆ ತಡೆಗಟ್ಟುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪುತ್ತೂರಿನ ಮಧುಮೇಹ ತಜ್ಞ ಡಾ. ನಝೀರ್ ಅಹಮ್ಮದ್ ಹೇಳಿದರು.
ಆರ್ಯಾಪು ಗ್ರಾಮದ ಸಂಟ್ಯಾರು ಶಾಲಾ ಬಳಿ ಎಸ್‌ಡಿಪಿಐ ಸಂಟ್ಯಾರು ಘಟಕದ ಆಶ್ರಯದಲ್ಲಿ ಆಶಿರ್ ಕಲ್ಲರ್ಪೆ ಸ್ಮರಣಾರ್ಥವಾಗಿ ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ಸಂಸ್ಥೆ ಮತ್ತು ಮಂಗಳೂರಿನ ಎ.ಜೆ. ಆಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಮತ್ತು ಮಂಗಳೂರಿನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಉದ್ಘಾಟಿಸಿದರು. ಎಸ್‌ಡಿಪಿಐ ಸಂಟ್ಯಾರ್ ಘಟಕದ ಅಧ್ಯಕ್ಷ ಝಕರಿಯಾ ಅಧ್ಯಕ್ಷತೆ ವಹಿಸಿದ್ದರು. ಹಂಟ್ಯಾರು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಮರಿಕೆ ಮಾತನಾಡಿದರು.
ಎಸ್‌ಡಿಪಿಐ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಶ್ರಫ್ ಬಾವು, ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥ ಉಮೇಶ್ ಗೌಡ, ಮೂಳೆ ತಜ್ಞ ಡಾ.ಹರ್ಷಾ ರಾವ್, ಬ್ಲಡ್ ಹೆಲ್ಪ್‌ಲೈನ್ ನಿರ್ವಾಹಕ ರಿಯಾಝ್ ಕಣ್ಣೂರು, ಆರ್ಯಾಪು ಗ್ರಾ.ಪಂ. ಸದಸ್ಯ ನಾಗೇಶ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.
ಪವರ್‌ಮನ್‌ಗಳಾದ ಚಂದ್ರಶೇಖರ್ ಮೆಸ್ತಕ್ ಯಾದಗಿರಿ ಹಾಗೂ ಪೀರು ನಾಯ್ಕ ಚಿಕ್ಕಬಳ್ಳಾಪುರ ಅವರನ್ನು ಸನ್ಮಾನಿಸಲಾಯಿತು. 40 ಯುನಿಟ್ ರಕ್ತ ಸಂಗ್ರಹಿಸಲಾಯಿತು. 130 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಟ್ಯಾರು ಘಟಕದ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ ವಂದಿಸಿದರು. ಅಝೀಝ್ ಟೋಪ್ಕೋ ಕಾರ್ಯಕ್ರಮ ನಿರೂಪಿಸಿದರು.